ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಾಲಿಗೆ ಎರಡನೇ ಮನಮೋಹನ್ ಸಿಂಗ್ ಆಗಲಿದ್ದಾರೆಯೇ ?!


ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆ ನಂತರ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಪಾಲಿಗೆ ಎರಡನೇ ಮನಮೋಹನ್ ಸಿಂಗ್ ಆಗಲಿದ್ದಾರೆಯೇ ?

ಹೌದು ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆಗಳು ! !

ಲೋಕಸಭಾ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಉಳಿದಿರುವಾಗಲೇ ಒಂದೊಮ್ಮೆ ಬಿಜೆಪಿ ಅಥವಾ ಎನ್ ಡಿ ಎ ದೋಸ್ತಿ ಕೂಟ ಅಧಿಕಾರದಿಂದ ವಂಚಿತವಾದರೆ  ಪ್ರತಿಪಕ್ಷಗಳು ಯಾರನ್ನು ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಸುತ್ತವೆ ಎಂಬ ಬಗ್ಗೆ ನಾನಾ ತರಹದ ಊಹಾಪೋಹಗಳು ಶುರುವಾಗಿವೆ. ಸ್ಪಷ್ಟವಾಗಿ ಹೇಳಬೇಕೆಂದರೆ  ಮೋದಿ ವಿರುದ್ಧ ಯಾರು ? ಎಂಬ ಪ್ರಶ್ನೆಯ ಮೇಲಿನ ಚರ್ಚೆ ಶುರುವಾಗಿದೆ.

ಫಲಿತಾಂಶ ಪ್ರಕಟಗೊಂಡ  ಮೇಲೆ ದೋಸ್ತಿಗಳಲ್ಲಿ ಅತಿದೊಡ್ಡ ಪಕ್ಷದ ನಾಯಕ ಪ್ರಧಾನಿಯಾಗುತ್ತಾರೆ ಎಂದು ಹೇಳಿಬಿಡಬಹುದು. ಆದರೆ, ಅತಿ ದೊಡ್ಡ ಪಕ್ಷದ ನಾಯಕರಲ್ಲದಿದ್ದರೂ ಐ.ಕೆ. ಗುಜ್ರಾಲ್, ದೇವೇಗೌಡ ಮತ್ತು ಚಂದ್ರಶೇಖರ ಅವರು ಪ್ರಧಾನಿ ಹುದ್ದೆಯಲ್ಲಿ ಕುಳಿತ  ಉದಾಹರಣೆಗಳೂ ಕಣ್ಣ ಮುಂದೆ ಇವೆ. ಇಲ್ಲಿರುವ ಪ್ರಶ್ನೆ ಒಂದೇ ಬಿಜೆಪಿಯನ್ನು ಅಧಿಕಾರದಿಂದ ದೂರ  ಇಡಲು  ಕಾಂಗ್ರೆಸ್ ಪಕ್ಷ ಅಥವಾ ಸರಕಾರದ ಭಾಗವಾಗದೇ ಹೊರಗಿನಿಂದಲೇ ಬೆಂಬಲ ನೀಡಲು ಕೆಲವು ಪಕ್ಷಗಳು ಮುಂದಾಗಬೇಕು.

ಎನ್ ಡಿ ಎ ಮೈತ್ರಿಕೂಟದ ಪಾಲುದಾರ ಪಕ್ಷಗಳು ಪ್ರಧಾನಿ ಹುದ್ದೆಗೆ ಇನ್ನೊಂದು ಬಾರಿ ನರೇಂದ್ರ ಮೋದಿಯೇ ಅಭ್ಯರ್ಥಿ ಎಂದು ಘೋಷಿಸಿ ಆಗಿದೆ. ಆದರೆ, ಪ್ರತಿಪಕ್ಷಗಳು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಎರಡು -ಮೂರು ಮಹಾಮೈತ್ರಿಗಳೇರ್ಪಡುವ ಸಾಧ್ಯತೆಗಳು ನಿಚ್ಚಳವಾಗಿದ್ದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮವಾಗಿ ಪ್ರಧಾನಿ ಅಭ್ಯರ್ಥಿಯಾಗಿ ಯಾರನ್ನು ಬಿಂಬಿಸಬೇಕು ಎಂಬುದು ತೀರ್ಮಾನವಾಗಿಲ್ಲ. ಆದರೆ, ಒಬ್ಬ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಅಗತ್ಯವಿಲ್ಲ . ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿರುವುದರಿಂದ  ಆ ಆಯ್ಕೆಗೆ ಸಾಕಷ್ಟು ಸ್ವಾತಂತ್ರ್ಯಗಳಿವೆ ಎಂಬ ಅಭಿಮತವೂ ಕೆಲವು ರಾಜಕೀಯ ನಾಯಕರ ನಾಯಕರಿಂದ ವ್ಯಕ್ತವಾಗಿದೆ.

ಅರುಣ  ಶೌರಿಯಿಂದ ಹಿಡಿದು ಯಶವಂತ ಸಿನ್ಹಾವರೆಗೆ , ಫಾರೂಕ್ ಅಬ್ದುಲ್ಲಾರಿಂದ ಹಿಡಿದು ಅರವಿಂದ ಕೇಜ್ರಿವಾಲಾವರೆಗೆ  ಕೇಳಿಬರುತ್ತಿರುವ ಒಂದೇ ಕೂಗೆಂದರೆ ಮೋದಿ-ಶಾ ರನ್ನು ಹೇಗಾದರೂ ಮಾಡಿ ಹಿಂದಿಕ್ಕಬೇಕು ಎಂಬುದು. 2019 ರ ಚುನಾವಣೆಯಲ್ಲಿ ಎನ್ ಡಿ ಎ ಮರಳಿ ಅಧಿಕಾರಕ್ಕೆ ಬಾರದಿದ್ದರೆ ಈ ಮೈತ್ರಿಗಳ ನಾಯಕರಲ್ಲಿ ಒಬ್ಬರು ಪ್ರಧಾನಿಯಾಗುವುದು ಖಚಿತ. ಹೌದು, ಜಿಗ್ನೇಶ ಮೇವಾನಿ ಅಥವಾ ಹಾರ್ದಿಕ್ ಪಟೇಲರೂ ಆಗಬಹುದು ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು .

ಆಸಕ್ತಿಕರ ವಿಷಯ ಏನು ಎಂದರೆ ಗಾಂಧಿ ಕುಟುಂಬಕ್ಕೆ ಪರಮಾಪ್ತರಾಗಿರುವ 76 ವರ್ಷದ ಮಲ್ಲಿಕಾರ್ಜುನ ಖರ್ಗೆ ಸದ್ಯ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ. ಅವರು ದೆಹಲಿಯಲ್ಲಿ ಸಾಕಷ್ಟು ಪತ್ರಿಕಾಗೋಷ್ಠಿಗಳನ್ನು ಮಾಡಿಲ್ಲ, ರಾಜಕೀಯ ಕಥೆ ಕಟ್ಟುವುದರಲ್ಲಿ ನಿಸ್ಸೀಮರಾಗಿಲ್ಲ, ಅತ್ಯಂತ ಹಿರಿಯ ನಾಯಕರಾಗಿದ್ದರೂ ಸ್ವಂತ ರಾಜ್ಯ ಕರ್ನಾಟಕದಲ್ಲಿಯೇ ಮುಖ್ಯಮಂತ್ರಿಯಾಗುವ ಕನಸೂ ಕಂಡಿಲ್ಲದ ವ್ಯಕ್ತಿ.

9 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಈ ಕಾರ್ಮಿಕ ಧುರೀಣ 2014 ರಲ್ಲಿ ಮೋದಿ ಅಲೆಯಲ್ಲಿಯೂ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಜಯಗಳಿಸುವ ಮೂಲಕ ಗಮನ ಸೆಳೆದಿದ್ದರು.

2017 ರ ರಾಜ್ಯ ವಿಧಾನಸಭೆ ಚುನಾವಣೆಯ ನಂತರ ದಲಿತ ನಾಯಕ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆಯೇ ಎಂದು ಕೇಳಿದಾಗ , ತಮ್ಮನ್ನು ಒಬ್ಬ ದಲಿತನನ್ನಾಗಿ ಪರಿಗಣಿಸಿ ಮುಖ್ಯಮಂತ್ರಿ ಮಾಡುವುದಾದರೆ ಬೇಡವೇ ಬೇಡ. ಪಕ್ಷದ ಹಿರಿಯ ನಾಯಕನಾಗಿ ಮಾಡಿದರೆ ಆಗಬಹುದು ಎಂದು ಅವರು ಉತ್ತರಿಸಿದ್ದರು. ಆದರೆ, ಚುನಾವಣೆ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಖರ್ಗೆ ಅಥವಾ ಬೇರೆ ನಾಯಕನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳ್ಳಿರಿಸುವ ಅವಕಾಶ ಸಿಗಲಿಲ್ಲ ಎಂಬುದು ಬೇರೆ ಮಾತು.

 

Leave a Reply

Your email address will not be published.