ಸಚಿವ ಪುಟ್ಟರಂಗಶೆಟ್ಟಿ ಪರ ಪೌರಡಾಳಿತ ಸಚಿವ ಶಿವಳ್ಳಿ ಬ್ಯಾಟಿಂಗ್


– ಸರ್ಕಾರ ಐದು ವರ್ಷ ಸುಭದ್ರ

– ನನಗೂ ಕೂಡ ಬಿಜೆಪಿ ಆಫರ್ ನೀಡಿತ್ತು

ಕೊಪ್ಪಳ : ಆಪ್ತ ಸಹಾಯಕರು ಮಾಡುವ ತಪ್ಪು ಕೆಲಸಕ್ಕೆ ಸಚಿವರನ್ನು ಹೊಣೆ ಮಾಡುವುದು ತಪ್ಪು ಎಂದು ಹೇಳುವ ಮೂಲಕ ಸಚಿವ ಪುಟ್ಟರಂಗಶೆಟ್ಟಿ ಪರ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಸಮರ್ಥಿಸಿಕೊಂಡರು,

ನಗರದಲ್ಲಿ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಸಿಕ್ಕಿರುವ 26 ಲಕ್ಷ ಹಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಹಣ ದೊರೆತ ಪ್ರಕರಣದ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ಸತ್ಯ ಗೊತ್ತಾಗಲಿದೆ. ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತದೆ. ಪಿಎ ಸಚಿವರಿಗೆ ಕೊಡಲು ತಂದ ಹಣ ಎಂದು ಹೇಳಿರುವ ಬಗ್ಗೆ ಪೊಲೀಸರು ಹೇಳಿಲ್ಲ, ಕೇವಲ ಆ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಅಷ್ಟೆ ತನಿಖೆ ಪೂರ್ಣಗೊಂಡ ನಂತರ ಸತ್ಯ ಹೊರಬರಲಿದೆ. ಇದರಲ್ಲಿ ಸಚಿವರ ತಪ್ಪು ಇಲ್ಲ ಎಂದು ಸಮಜಾಯಿಷಿ ನೀಡಿದರು.

ನನಗೂ ಹಿಂದೆ ಆಫರ್ ಬಂದಿತ್ತು :

6 ತಿಂಗಳಿಂದ ಬಿಜೆಪಿಯವರು ಈ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಇಂದು ಬೀಳುತ್ತೆ, ನಾಳೆ ಬೀಳುತ್ತೆ, 24 ಗಂಟೆಯಲ್ಲಿ ಸರ್ಕಾರ ಬೀಳುತ್ತೆ ಎಂದು ಹೇಳುತ್ತಾರೆ. ಆದರೆ, ಸರ್ಕಾರ ಬೀಳೋದಿಲ್ಲ. ಐದು ವರ್ಷ ಪೂರ್ಣ ಆಡಳಿತ ನಡೆಸುತ್ತದೆ. ಈಗ ಮರಳಿ ಚುನಾವಣೆಗೆ ಹೋಗಲು ಯಾವ ಶಾಸಕರೂ ಸಿದ್ಧರಿಲ್ಲ, ಪುನಃ ಚುನಾವಣೆಗೆ ಹೋಗುವುದು ಅಂದರೆ ಅದೇನು ಮಕ್ಕಳಾಟ ಅಲ್ಲ. ಜನರು ನಮಗೆ ಐದು ವರ್ಷ ಸೇವೆ ಮಾಡಿ ಎಂದು ಆಯ್ಕೆ ಮಾಡಿ ಕಳಿಸಿದ್ದಾರೆ. ಆಫರ್‍ಗಳು ಬರುತ್ತವೆ ಎಂದು ಹೋಗಬಾರದು. ನನಗೂ ಹಿಂದೆ ಆಫರ್ ಬಂದಿತ್ತು. ಅದನ್ನು ಈ ಹಿಂದೆಯೇ ಹೇಳಿದ್ದೆ. ಯಾವುದೇ ಆಫರ್ ಬಂದರೂ ನಮ್ಮ ಯಾವ ಶಾಸಕರು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರನ್ನು ನಾವು ಮುಖ್ಯಮಂತ್ರಿ ಎಂದು ಆಯ್ಕೆ ಮಾಡಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಲೋಪದೋಷಗಳು ಇರುತ್ತವೆ. ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಅದಕ್ಕಾಗಿ ಸಮನ್ವಯ ಸಮಿತಿ ಇದೆ ಎಂದರು.

ನಗರಸಭೆ ಹಾಗೂ ಸ್ಥಳೀಯಾಡಳಿತದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿ ಅರ್ಜಿ ನ್ಯಾಯಾಲಯದಲ್ಲಿದೆ. ಕೋರ್ಟ್ ನೀಡುವ ತೀರ್ಪಿಗೆ ಸರ್ಕಾರ ಬದ್ಧವಾಗಿದೆ. ಬೇರೆ ಇಲಾಖೆಗೆ ಹೋಗಿರುವ ನಮ್ಮ ಇಲಾಖೆಯ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರ ಸಮಸ್ಯೆಗಳು ನಮಗೆ ಅರ್ಥವಾಗಿವೆ. ಪೌರಕಾರ್ಮಿಕರ ವಿಷಯವಾಗಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಅವರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ರಾಜ್ಯಾದ್ಯಂತ ಫಾರ್ಮ್ ನಂ-3 ನೀಡುವ ಬಗ್ಗೆ ಸಾಕಷ್ಟು ಸಮಸ್ಯೆಗಳಿರುವುದು ನಮಗೂ ಮನವರಿಕೆಯಾಗಿದೆ. ಬರುವ ದಿನಗಳಲ್ಲಿ ಅವುಗಳನ್ನೆಲ್ಲ ಸರಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಮುಖಂಡರಾದ ಸುರೇಶ್ ಭೂಮರಡ್ಡಿ. ಎಸ್.ಬಿ. ನಾಗರಳ್ಳಿ, ಜುಲ್ಲು ಖಾದರಿ, ಅಮ್ಜದ್ ಪಟೇಲ್, ಕಾಟನ್ ಪಾಶಾಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published.