ಬರ ಪರಿಹಾರಕ್ಕೆ 2,430 ಕೋಟಿ ರೂ. ನೀಡುವಂತೆ ಕೇಂದ್ರ ಸರಕಾರಕ್ಕೆ ಕೇಳಿದ್ದೇವೆ: ಸಚಿವ ದೇಶಪಾಂಡೆ


ಬೆಳಗಾವಿ:  ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ಎದುರಾಗಿದ್ದು, ಕೇಂದ್ರ ಸರಕಾರದಿಂದ 2,430 ಕೋಟಿ ರೂ. ಬರ ಪರಿಹಾರಕ್ಕಾಗಿ ಕೇಳಿದ್ದೇವೆ ಎಂದು ಕಂದಾಯ ಸಚಿವರು ಹಾಗೂ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಹೇಳಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಕೆಲವು ಬರಪೀಡಿತ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಹೊರವಲಯದ ಪಂತಬಾಳೇಕುಂದ್ರಿ ಗ್ರಾಮದಲ್ಲಿ ರೈತರು ಬರ ಪರಿಹಾರ ಯೋಜನೆಯಲ್ಲಿ ಹಸಿರು ಮೇವು ಉತ್ಪಾದನೆ ಮಾಡಿರುವುದನ್ನು ಪರಿಶೀಲಿಸಿ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ರಾಜ್ಯದ 156 ತಾಲೂಕುಗಳು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಬರ ನಿರ್ವಹಣೆಗೆ ಪ್ರತಿಯೊಂದು ತಾಲೂಕಿಗೆ 25 ಲಕ್ಷ ರೂ. ನೀಡಲಾಗಿದೆ. ಜೊತೆಗೆ ಬರ ಪೀಡಿತವಲ್ಲದ ತಾಲೂಕುಗಳಿಗೂ 25 ಲಕ್ಷ ರೂ. ನೀಡಲಾಗಿದೆ. ಕುಡಿಯುವ ನೀರಿನ ಕೊರತೆಯಾಗದಂತೆ ಮನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದರು.

ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲು ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರ ನಿರ್ವಹಣೆಗೆ ಅನುದಾನ ಲಭ್ಯ ಇದೆ. ಬರ ಇರುವಲ್ಲಿ ಟಾಸ್ಕಫೋರ್ಸ್ ಸಮಿತಿಗೆ 25 ಲಕ್ಷ ರೂ. ಅನುದಾನ ನೀಡಲಾಗಿದೆ. ಮೇವಿನ ಕೊರತೆ ನೀಗಿಸಲು ಎಸ್.ಡಿ.ಆರ್.ಎಫ್ ತಂಡದಿಂದ 25 ಕೋಟಿ ರೂ. ಅನುದಾನವನ್ನು ಕೃಷಿ ಇಲಾಖೆಗೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ 78,632 ಹಸಿರು ಮೇವಿನ ಕಿಟ್ ವಿತರಿಸಲಾಗಿದೆ. ಹಾಗೂ ದನಕರಗಳಿಗೆ ಕೂಡಿಯುವ ನೀರನ್ನು ಒದಗಿಸಲು ಕೃಷಿ ಭೂಮಿಯಲ್ಲಿ ಅಲ್ಲಲ್ಲಿ ಕೃಷಿಹೊಂಡಗಳ ನಿರ್ಮಾಣ ಮಾಡುಲಾಗುವುದು ಮತ್ತು ಬರಗಾಲದಲ್ಲಿ ಉದ್ಯೋಗ ಸಮಸ್ಯೆಯಾಗದಂತೆ ನರೇಗಾ ಕೂಲಿ ದಿನಗಳನ್ನು 100 ರಿಂದ 150 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.

ಹಿಂಗಾರು ಬೆಳೆ ಹಾನಿಯಾಗಿರುವ ಪ್ರದೇಶಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಸಂಪೂರ್ಣ ಸಮೀಕ್ಷೆ ವರದಿ ಜಿಲ್ಲಾಧಿಕರಿಗಳು ಸಲ್ಲಿಸಿದ ಮೊದಲ ವಾರದೊಳಗೆ ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ಹಿಂಗಾರು ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರವನ್ನು ಸೂಚಿಸಲಾಗುವುದು ಎಂದು ತಿಳಿಸಿದರು

ಸಂಸದ ಸುರೇಶ ಅಂಗಡಿ, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಕೆ.ವಿ.ರಾಜೇಂದ್ರ, ಉಪವಿಭಾಗಧಿಕಾರಿ ಕವಿತಾ ಯೋಗಪ್ಪನವರ, ತಹಸೀಲ್ದಾರ್  ಮಂಜುಳಾ ನಾಯಕ, ಕೃಷಿ ಇಲಾಖೆ ಜಂಟಿ ನಿರ್ದೆಶಕ ಜಿಲಾನಿ ಮೊಕಾಶಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.