ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಕ್ಷಣಗಣನೆ: ಬೃಹತ್ ವೇದಿಕೆ ಸಜ್ಜು


ಬೈಲಹೊಂಗಲ:  ರಾಜ್ಯ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿ ಗ್ರಾಮದಲ್ಲಿ ಜ.12, 13 ರಂದು ನಡೆಯಲಿರುವ ಸಂಗೊಳ್ಳಿ ಉತ್ಸವಕ್ಕಾಗಿ ಸಕಲ ಸಿದ್ದತೆಪೂರ್ಣಗೊಂಡಿದೆ.

ಸಂಗೊಳ್ಳಿ ಉತ್ಸವಕ್ಕಾಗಿ ಗ್ರಾ. ಪಂ ಯಿಂದ ಪ್ರತಿಯೊಂದು ಬೀದಿಗಳ ಸ್ವಚ್ಚತೆ, ರಸ್ತೆ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ತಳೀರು ತೋರಣ ಶೃಂಗಾರ ಮಾಡಿ ಹಬ್ಬದ ಸಂಭ್ರಮ ಮನೆ ಮಾಡುವಂತೆ ಮಾಡಲಾಗಿದೆ. ಉತ್ಸವಕ್ಕೆ ಬರುವ ಜನರಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ.

ರಾಯಣ್ಣನ ಶಾಲೆಯಲ್ಲಿ ಭವ್ಯ ವೇದಿಕೆ-  ಸಂಗೊಳ್ಳಿ ಗ್ರಾಮದ ರಾಯಣ್ಣನ ಶಾಲೆ ಆವರಣದಲ್ಲಿ ಭವ್ಯ ವೇದಿಕೆ ಸಿದ್ಧಪಡಿಸಲಾಗಿದ್ದು, ಹತ್ತು ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.  ವಿಐಪಿ, ವಿವಿಐಪಿ, ಪತ್ರಿಕಾ ವರದಿಗಾರರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆ, ಸಿಡಿಪಿಒ ಇಲಾಖೆಯಿಂದ ವಸ್ತುಪ್ರದರ್ಶನಗಳ ಮಳಿಗೆ ತೆರೆಯಲಾಗಿದೆ. ಕಬಡ್ಡಿ, ಮಲ್ಲಕಂಬ, ವಾಲಿಬಾಲ್, ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ ಸೇರಿದಂತೆ ಎರಡು ದಿನಗಳಕಾಲ ವಿವಿಧ ಸಾಂಸ್ಕೃತಿಕ, ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ವೇದಿಕೆ ಎದುರು ಮಹಾದ್ವಾರ ತೆರೆಯಲಾಗಿದೆ.

ನಿತ್ಯ ಪೂಜೆ: ತಾಯ್ನಾಡಿಗಾಗಿ ಹೋರಾಡಿ ಬಲಿದಾನ ಮಾಡಿದ ವ್ಯಕ್ತಿ ದೇವರಿಗೆ ಸಮಾನ ಎಂಬಂತೆ ರಾಯಣ್ಣನಿಗೆ ಡೊಳ್ಳಿನ ಕುಟುಂಬಸ್ಥರಿಂದ ಪ್ರತಿನಿತ್ಯ ಅಭಿಷೇಕ ನಡೆಸಲಾಗುತ್ತಿದೆ. ಇದು ಇತಿಹಾಸದಲ್ಲಿ ಅನನ್ಯ, ಅಪರೂಪದ ಕಾರ್ಯವಾಗಿದೆ.

ಉದ್ಘಾಟನೆ: ನಾಳೆ ಬೆಳಗ್ಗೆ 6ಕ್ಕೆ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಯಣ್ಣನ ಪ್ರತಿಮೆಗೆ ಪೂಜೆ ನಡೆಯಲಿದೆ.

ಬೆಳಗ್ಗೆ 10ಕ್ಕೆ ಸಚಿವ ಸತೀಶ ಜಾರಕಿಹೊಳಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿ ರಾಯಣ್ಣನ ಪ್ರತಿಮೆಗೆ ಗೌರವ ಸಲ್ಲಿಸುವರು.

ಮುಖ್ಯಸಚೇತಕ ಗಣೇಶ ಹುಕ್ಕೇರಿ ರಾಯಣ್ಣ ಜ್ಯೋತಿ ಬರಮಾಡಿಕೊಳ್ಳುವರು. 10.30ಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಸದಸ್ಯ ಮಹಾಂತೇಶ ಕವಟಗಿಮಠ ಜಾನಪದ ಕಲಾವಾಹಿನಿ ಉದ್ಘಾಟಿಸುವರು. 11ಕ್ಕೆ ಸಂಸದ ಸುರೇಶ ಅಂಗಡಿ ವಸ್ತು ಪ್ರದರ್ಶನ ಉದ್ಘಾಟಿಸುವರು.

12ಕ್ಕೆ ವಿಚಾರ ಸಂಕೀರಣ ನಡೆಯಲಿದ್ದು, ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ ಉದ್ಘಾಟಿಸುವರು. ಧಾರವಾಡ ಕವಿವಿ ಪುರಾತತ್ವ ಪ್ರಾಧ್ಯಾಪಕ ನಿವೃತ್ತ ಇತಿಹಾಸ ತಜ್ಞ ಡಾ.ಆರ್.ಎಂ.ಷಡಕ್ಷರಯ್ಯ ಅಧ್ಯಕ್ಷತೆವಹಿಸುವರು. ಸಂಜೆ 7ಕ್ಕೆ ನಡೆಯುವ ಉದ್ಘಾಟಣಾ ಸಮಾರಂಭದ ಸಾನಿಧ್ಯವನ್ನು ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಸಚಿವ ಅನಂತಕುಮಾರ ಹೆಗಡೆ ಉಪಸ್ಥಿತಿವಹಿಸುವರು.

ಸಚಿವ ಸತೀಶ ಜಾರಕಿಹೊಳಿ ಉತ್ಸವ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಸಚಿವರಾದ ಡಿ.ಕೆ.ಶಿವಕುಮಾರ, ಸಾ.ರಾ.ಮಹೇಶ, ಸಿ.ಎಸ್. ಶಿವಳ್ಳಿ, ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ಜಿಪಂ ಅಧ್ಯಕ್ಷೆ ಆಶಾ ಐಹೋಳೆ ಆಗಮಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಲ್ಲಿದ್ದು, ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೊರೆ, ಪ್ರಕಾಶ ಹುಕ್ಕೇರಿ ಅನೇಕ ಗಣ್ಯರು, ಭಾಗವಹಿಸುವರು. ರಾತ್ರಿ 9ಕ್ಕೆ ಶಾಸಕ ಮಹಾಂತೇಶ ದೊಡಗೌಡರ ವೀರರ ಸ್ಮರಣೆಗಾಗಿ ದೀಪೋತ್ಸವ ಬೆಳೆಗಿಸುವರು.

ಸಂಗೊಳ್ಳಿ ಉತ್ಸವಕ್ಕೆ 30 ಲಕ್ಷ ರೂ.ಅನುದಾನದ ಅವಶ್ಯಕತೆ ಇದೆ. ಈಗಾಗಲೇ 20 ಲಕ್ಷ ರೂ.ಬಂದಿದೆ. ಇನ್ನೂ 10 ಲಕ್ಷ ರೂ.ಅನುದಾನ ದೊರೆಯಲಿದೆ. ಉತ್ಸವಕ್ಕೆ ಪ್ರತಿಯೊಬ್ಬರು ಬಂದು ರಾಯಣ್ಣನ ಆದರ್ಶ, ಸ್ವತಂತ್ರ ಪ್ರೇಮ ಮೈಗೂಡಿಸಿಕೊಂಡು ಉತ್ಸವ ಯಶಸ್ವಿಗೊಳಿಸಬೇಕು ಎಂದು ಬೈಲಹೊಂಗಲ ಎಸಿ ಶಿವಾನಂದ ಭಜಂತ್ರಿ ಮನವಿ ಮಾಡಿದ್ದಾರೆ.

-ಉದಯ

Leave a Reply

Your email address will not be published.