ಸಂಕ್ರಾಂತಿ ನಂತ್ರ ರಾಜಕೀಯ ಕ್ರಾಂತಿ ಆದ್ರೆ ಆಗ್ಲಿ ನೋಡೋಣಾ ಅಂದ್ರಾ ಸತೀಶ ಜಾರಕಿಹೊಳಿ ?!


ಬೆಳಗಾವಿ: “ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಕ್ರಾಂತಿಯಾದರೆ ಆಗಲಿ ಬಿಡಿ, ಆದಾಗ ನೋಡೋಣ…!”

ಹೀಗೆಂದು ಹೇಳಿದವರು ಅರಣ್ಯ, ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ !

ಬೆಳಗಾವಿಯಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯನೂ ಇಲ್ಲಿಯೇ ಇರುತ್ತೆ, ದೇಶಾನೂ ಇಲ್ಲಿಯೇ ಇರುತ್ತೆ, ಏನೂ ಆಗೋದಿಲ್ಲ, ಕ್ರಾಂತಿಯಾದ್ರೂ ನಾವೂ ಇಲ್ಲಿಯೇ ಇರ್ತೀವಿ , ಎಲ್ಲಾ ನಡೀತಾನೇ ಇರುತ್ತೆ. ಆಪರೇಷನ್ ಕಮಲ ದ  ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಹೇಳಿದರು.

ಬಿಜೆಪಿ ದೋಸ್ತಿ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕೀಯದಲ್ಲಿ ಕೆಲವು ತಂತ್ರಗಾರಿಕೆ ಸ್ವಾಭಾವಿಕ. ಬಿಜೆಪಿಯವರು ಏನೇ ಮಾಡಿದರೂ ನಮ್ಮ ಶಾಸಕರು ಯಾರೂ ಹೋಗೊಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಪ್ರವಾಸೋದ್ಯಮ ಮತ್ತು ಅರಣ್ಯ ಬೆಳೆಸುವ ಜತೆಗೆ ರಕ್ಷಣೆಗೆ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.

ಎಲ್ಲದಕ್ಕೂ ಕಾಲಾವಕಾಶ ಬೇಕಾಗುತ್ತದೆ. ಕಾನೂನು ಬದ್ಧವಾಗಿ ಹೆಚ್ಚು ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದ್ದು, ರಾಜ್ಯಾದ್ಯಂತ ಹಕ್ಕು ಪತ್ರ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.

ಅತೃಪ್ತರ ಬಾಯಿಗೆ ಬೀಗ ಹಾಕಬೇಕೆಂಬ ವಿಚಾರ ಯಾವ ಸಭೆಯಲ್ಲಿಯೂ ಚರ್ಚೆಗೆ ಬಂದಿಲ್ಲ. ಪುಟ್ಟರಂಗಶೆಟ್ಟಿ ವಿಚಾರವಾಗಲೀ, ಬೇರೆ ವಿಚಾರಗಳಾಗಲೀ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಇರುವ 50 ವಿಷಯಗಳನ್ನೇ ಚರ್ಚೆ ಮಾಡಲು ಸಮಯ ಸಾಲದಾಗಿತ್ತು ಎಂದರು.

ರಾಮಮಂದಿರ ಸ್ಥಾಪನೆಗೆ ಯಾರೂ ಬೇಡವೆಂದಿಲ್ಲ. ಆ ವಿಚಾರ ಬಿಜೆಪಿಯ ಗುತ್ತಿಗೆಯೂ ಅಲ್ಲ ಎಂದೂ ಸಚಿವರು ಹೇಳಿದರು.

 

 

 

Leave a Reply

Your email address will not be published.