ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು: ಸಚಿವ ಸತೀಶ ಜಾರಕಿಹೊಳಿ ಘೋಷಣೆ


ಗೋಕಾಕ: ಬೆಳಗಾವಿ ಜತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚು ಒತ್ತು ಕೊಡುವುದಾಗಿ ಅರಣ್ಯ, ಜೈವಿಕ ಹಾಗೂ ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಗೋಕಾಕ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಹಾಗೂ ಗೋಕಾಕ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೂರಾರು ವರ್ಷಗಳ ಹಿಂದೆ ಆಗಿ ಹೋಗಿರುವ ಸಂತಶ್ರೇಷ್ಠ ಕನಕದಾಸರ ತತ್ವಾದರ್ಶಗಳು ಇಂದಿಗೂ ಎಂದೆಂದಿಗೂ ನಮಗೆಲ್ಲ ಅನುಕರಣೀಯವಾಗಿವೆ. ಅವರ ಜಯಂತಿ ಉತ್ಸವ ಕೇವಲ ಮೆರವಣಿಗೆ , ಭಾಷಣಕ್ಕೆ ಸೀಮಿತವಾಗುವುದು ಬೇಡ. ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಚಿವರು ಹೇಳಿದರು.

ಎಲ್ಲ ವರ್ಗಗಳ ಜನತೆಗೆ ವಿಶೇಷವಾಗಿ ಶೋಷಿತವರ್ಗದವರ ಏಳ್ಗೆಗೆ ಹಿಂದಿನ ಸಿದ್ದರಾಮಯ್ಯ ಸರಕಾರ ಸಾಕಷ್ಟು ಯೋಜನೆಗಳನ್ನು  ಘೋಷಿಸಿದೆ. ಇಂದಿನ ಸರಕಾರವೂ ಅವುಗಳನ್ನು ಕಾರ್ಯರೂಪಕ್ಕೆ ತರಲು ಮುತುವರ್ಜಿ ವಹಿಸುತ್ತಿದೆ. ಸಚಿವರಾಗಿ ತಾವು ಅಧಿಕಾರದಲ್ಲಿ ಇರುವವರೆಗೂ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಡುವುದಾಗಿ ಅವರು ತಿಳಿಸಿದರು.

ಕನಕದಾಸರೂ ಸೇರಿದಂತೆ ನಮ್ಮ ನಾಡಿನ ಏಳ್ಗೆಗಾಗಿ ಶ್ರಮಿಸಿದ ಪುಣ್ಯಪುರುಷರ ಕುರಿತಾಗಿ ಮಾಹಿತಿ ಸಂಗ್ರಹಿಸಿ ಭಾಷಣ ಮಾಡುವ, ಪ್ರಬಂಧ ಬರೆಯುವ ವಿದ್ಯಾರ್ಥಿಗಳಿಗೆ ಹೆಲಿಕ್ಯಾಪ್ಟರ್ ಪ್ರವಾಸದ ಭಾಗ್ಯ ಕಲ್ಪಿಸುವ ವಿಶಿಷ್ಟ ಯೋಜನೆಯನ್ನು ಸಚಿವರು ಪುನರುಚ್ಚರಿಸಿದರು.

ಜಯಂತಿ ಕಾರ್ಯಕ್ರಮಗಳನ್ನು ಮೆರವಣಿಗೆಗೆ ಸೀಮಿತಗೊಳಿಸುವ ಬದಲು ಮಹಾಪುರುಷರ ಜೀವನ ಕ್ರಮವನ್ನು ಅರಿತುಕೊಂಡು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದೂ ಅವರು ಕಿವಿಮಾತು ಹೇಳಿದರು.

ಕಾಗಿನೆಲೆ ಮಠದ ಕಾರ್ಯಚಟುವಟಿಕೆಗಳಿಗೆ ತಾವು ಸದಾ ಬೆಂಬಲ ನೀಡುವುದಾಗಿಯೂ ಅವರು ಪ್ರಕಟಿಸಿದರು.

ಸಿದ್ದಲಿಂಗ ದಳವಾಯಿ, ಡಾ. ರಾಜೇಂದ್ರ ಸಣ್ಣಕ್ಕಿ, ಮಡ್ಡೆಪ್ಪ ತೋಳಿನವರ, ಅಥಣಿ ತಾಲೂಕು ಕವಲಗುಡ್ಡ ಅಮರೇಶ್ವರ ಸ್ವಾಮೀಜಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿಯವರನ್ನು ಸನ್ಮಾನಿಸಲಾಯಿತು. ಜತೆಗೆ ರಾಷ್ಟ್ರಪತಿ ಪ್ರತಿಭಾ ಪುರಸ್ಕಾರ ಪಡೆದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published.