ವೈದ್ಯರ ನಿರ್ಲಕ್ಷ್ಯ: ಆಸ್ಪತ್ರೆಯ ಮಹಡಿಯಿಂದ ಬಿದ್ದು ಮಹಿಳೆ ಸಾವು

ಮೃತ ಶಾರದಮ್ಮ
ಲಿಫ್ಟ್ ಕೊಠಡಿಯ ತೆರೆದ ಬಾಗಿಲು
ಡಾ.ಜಯಂತ್ ಆಡಳಿತ ವೈದ್ಯಾಧಿಕಾರಿ, ಪಾಂಡವಪುರ ಸಾರ್ವಜನಿಕ ಆಸ್ಪತ್ರೆ.

ರಾತ್ರೋರಾತ್ರಿ ಶವ ಪರೀಕ್ಷೆ ನಡೆಸಿದ ವೈದ್ಯರಿಂದ ಪ್ರಕರಣ ಮುಚ್ಚಿಹಾಕುವ ಯತ್ನ ಆರೋಪ
ಪಾಂಡವಪುರ: ವೈದ್ಯರ ನಿರ್ಲಕ್ಷ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರು ನಿರ್ಮಾಣ ಹಂತದಲ್ಲಿದ್ದ 2ನೇ ಮಹಡಿಯ ಲಿಫ್ಟ್ ಕೊಠಡಿಯಿಂದ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ರಾತ್ರೋರಾತ್ರಿಯೇ ಮೃತ ಮಹಿಳೆಯ ಶವ ಪರೀಕ್ಷೆ ನಡೆಸಿದ ವೈದ್ಯರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ.

ತಾಲ್ಲೂಕಿನ ಎಣ್ಣೇಹೊಳೆ ಕೊಪ್ಪಲು ಗ್ರಾಮದ ಶಾರದಮ್ಮ(62) ಮೃತರು.

ಘಟನೆ ವಿವರ : ಶಾರದಮ್ಮ ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ತಮ್ಮ ಮಗಳಿಗೆ ಡಯಾಲಿಸಿಸ್ ಮಾಡಿಸಲು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಬುಧವಾರ ಸಂಜೆ ಕರೆತಂದಿದ್ದರು, ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಡಯಾಲಿಸ್ ನಡೆಯುತ್ತಿದ್ದ ವೇಳೆ ಪಕ್ಕದ ಕೊಠಡಿಯಲ್ಲಿದ್ದ ಶೌಚಾಲಯಕ್ಕೆ ಶಾರದಮ್ಮ ಹೋದ ಸಂದರ್ಭದಲ್ಲಿ ಕತ್ತಲೆ ಇದ್ದ ಕಾರಣ ಶೌಚಾಲಯ ಎಂದುಕೊಂಡು ನಿರ್ಮಾಣ ಹಂತದಲ್ಲಿದ್ದ ಲಿಫ್ಟ್ ಕೊಠಡಿಯೊಳಗೆ ಕಾಲಿಟ್ಟು ಕೆಳಕ್ಕೆ ಬಿದ್ಧ ಪರಿಣಾಮ, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟರು.

ತಡ ರಾತ್ರಿಯಾದರೂ ತಾಯಿ ಬಾರದಿದ್ದನ್ನು ಕಂಡ ಮಗಳು ಹುಡುಕಾಟ ನಡೆಸಿದಾಗ ನೆಲಹಂತದಲ್ಲಿನ ಲಿಫ್ಟ್ ರೂಮಿನಲ್ಲಿ ಶಾರದಮ್ಮ ಅವರ ಮೃತ ದೇಹ ಪತ್ತೆಯಾಯಿತು.

ನಂತರ ತರಾತುರಿಯಲ್ಲಿ ಮೃತ ಶಾರದಮ್ಮ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಶಾರದಮ್ಮ ಕುಟುಂಬದವರಿಗೆ ಹಣದ ಆಮಿಷ ಒಡ್ಡಿ, ಶವವನ್ನು ಆದಷ್ಟು ಬೇಗ ಆಸ್ಪತ್ರೆಯಿಂದ ಸಾಗಹಾಕಿ ಕೈತೊಳೆದುಕೊಂಡರು ಎಂದು ಸ್ಥಳೀಯರು ಆರೋಪಿಸಿದರು.

ವೈದ್ಯರ ನಿರ್ಲಕ್ಷ್ಯ: ನಿರ್ಮಾಣ ಹಂತದಲ್ಲಿರುವ ಲಿಫ್ಟ್ ಕೊಠಡಿಗೆ ಬಾಗಿಲು ಇದ್ದರೂ ವೈದ್ಯರು ಅದನ್ನು ಮುಚ್ಚಿಸದ ಕಾರಣ ಅಮಾಯಕ ವೃದ್ಧೆ ಶಾರದಮ್ಮ ಕತ್ತಲೆಯಲ್ಲಿ ಶೌಚಾಲಯ ಎಂದು ತಿಳಿದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೂಡಲೇ ವೈದ್ಯರ ನಿರ್ಲಕ್ಷ್ಯತನದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

Leave a Reply

Your email address will not be published.