ಕೊಪ್ಪಳ ಜಿಲ್ಲೆಯಲ್ಲಿ ಮುಂದುವರೆದ ಬಾಲ್ಯ ವಿವಾಹ ಪದ್ಧತಿ..!


413 ಪ್ರಕರಣಗಳು ಪತ್ತೆ | 24 ಪ್ರಕರಣಗಳ ದಾಖಲು, ಮೂವರಿಗೆ ಶಿಕ್ಷೆ |

ಕೊಪ್ಪಳ : ಆಧುನಿಕ ಭರಾಟೆ, ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿಯೂ ಸಹ ಹತ್ತು ಕಾನೂನು ಕಟ್ಟೆಳೆಗಳ ಮಧ್ಯೆ ಕೊಪ್ಪಳ ಜಿಲ್ಲೆಯಲ್ಲಿ ಇಂದಿಗೂ ಮೂಡನಂಭಿಕೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ದೇವರು, ಧರ್ಮ ಹಾಗೂ ನಂಬಿಕೆಯ ಆಧಾರದ ಮೇಲೆ ಹಲವು ಘಟನೆಗಳು ನಡೆಯುತ್ತಿರುವುದು ಮಾತ್ರ ನಿಂತಿಲ್ಲ.

ಅನಕ್ಷರತೆ, ಅಜ್ಞಾನ, ಮತ್ತು ನಂಬಿಕೆಯ ಮೇಲೆ ನಡೆದಿರುವ ಅನಿಷ್ಠ ಪದ್ಧತಿಗಳನ್ನು ತಡೆಗಟ್ಟಲು ಹಲವಾರು ಕಠಿಣ ಕಾನೂನುಗಳು ಇವೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವುಗಳ ನಿವಾರಣೆಗಾಗಿ ಕೋಟ್ಯಾಂತರ ಹಣ ವೆಚ್ಚಮಾಡುತ್ತಿದ್ದರೂ ಸಹ ಇಲ್ಲಿ ಮಾತ್ರ ಅನಿಷ್ಠಪದ್ಧತಿಗಳ ಆಚರಣೆಗಳು ಮಾತ್ರ ನಿಂತಿಲ್ಲ,

ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿನದಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಇದ್ದು ಅವುಗಳು ಕೆಳಹಂತದವರೆಗೆ ತಲುಪದೆ ಇರುವದರಿಂದ ಬಾಲ್ಯ ವಿವಾಹ ಪದ್ಧತಿ ಸೇರಿದಂತೆ ಇತರೆ ಸಾಮಾಜಿಕ ಅನಿಷ್ಟಗಳು ಮಾತ್ರ ಯಥವತ್ತವಾಗಿ ನಡೆದಿವೆ. ಜಿಲ್ಲೆಯಲ್ಲಿ ಬಾಲ್ಯವಿವಾಹಗಳನ್ನು ತಡೆಗಟ್ಟಲು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಜಾಗೃತಿ ನಡೆಸುತ್ತಿದ್ದರೂ ಸಹ ಬಾಲ್ಯ ವಿವಾಹಗಳು ಮಾತ್ರ ನಿಂತಿಲ್ಲ.

ವಿಶೇಷವಾಗಿ ಜಿಲ್ಲೆಯಲ್ಲಿ ಅಲ್ಲೊಂದು, ಇಲ್ಲೊಂದು ಬಾಲ್ಯ ವಿವಾಹ ನಡೆಯುತ್ತಿರುವ ವರದಿ ಬರುತ್ತಲೆ ಇವೆ. ಬಾಲ್ಯವಿವಾಹಗಳನ್ನು ಪತ್ತೆ ಹಚ್ಚಿ ಅವುಗಳಿಗೆ ನೀಡುವ ಶಿಕ್ಷೆ ಪ್ರಮಾಣವೂ ಕಡಿಮೆಯಾಗಿದೆ. ಕಳೆದ ಎಂಟು ವರ್ಷದಲ್ಲಿ ಜಿಲ್ಲೆಯ ಬೇವೂರ ಗ್ರಾಮದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣವೊಂದರಲ್ಲಿ ಮಾತ್ರ ಮೂವರಿಗೆ ಶಿಕ್ಷೆಯಾಗಿದ್ದನ್ನು ಬಿಟ್ಟರೆ, ಇನ್ನೂಳಿದಂತೆ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ದೇವರು, ಧರ್ಮ, ಮೂಢನಂಬಿಕೆ, ವಲಸೆ ಕಾರ್ಮಿಕರು, ಅರೆ ಅಲೆಮಾರಿಗಳು, ಭಾವನಾತ್ಮಕ ಸಂಬಂಧ, ಅನಕ್ಷರತೆ, ಅಜ್ಞಾನದಿಂದ ಬಾಲ್ಯ ವಿವಾಹಗಳು ಹೆಚ್ಚು ನಡೆಯುತ್ತಿವೆ ಎನ್ನಲಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಅರಿವಿಗೆ ಬರುವ ಮುಂಚೆಯೇ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಳೆದುಕೊಳ್ಳುವ ಪೋಷಕರು ತಮ್ಮ ಮಕ್ಕಳನ್ನು ಈ ಪದ್ಧತಿಗೆ ತಳ್ಳುವುದು ನಿಲ್ಲಬೇಕಾಗಿದೆ.

ಸಣ್ಣ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಅವಧಿಗೆ ಮುನ್ನವೇ ಶಿಶುಗಳ ಜನನ, ಗರ್ಭಿಣಿಯರಿಗೆ ತೊಂದರೆ, ಅಶಕ್ತತೆ, ಅಪೌಷ್ಟಿಕತೆಯಿಂದ ಆರೋಗ್ಯವಂತ ಮಕ್ಕಳು ಜನಿಸುವುದು ಕಷ್ಟವಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳಿಗೆ ೧೮ ವರ್ಷ, ಗಂಡುಮಕ್ಕಳಿಗೆ ೨೧ ವರ್ಷ ಮದುವೆ ವಯಸ್ಸನ್ನು ನಿಗದಿ ಮಾಡಿದ್ದರಿಂದ ಅದರೊಳಗಿನ ಮದುವೆಯನ್ನು ಬಾಲ್ಯವಿವಾಹ ಎಂದೇ ಪರಿಗಣಿಸಲಾಗುತ್ತದೆ ಎಂದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಹೇಳುತ್ತಾರೆ.

ಜಾಗೃತಿ ಪರಿಣಾಮವಾಗಿ ಬಾಲ್ಯ ವಿವಾಹಗಳು ನಗರ ಪ್ರದೇಶದಲ್ಲಿ ಅತ್ಯಂತ ಕಡಿಮೆಯಾಗಿದ್ದು, ಆಶಾದಾಯಕ ಬೆಳವಣಿಗೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ನಡೆಯುತ್ತಿದ್ದು, ಮಕ್ಕಳ ರಕ್ಷಣಾ ಘಟಕ ನಿರಂತರ ನಿಗಾವಹಿಸಿದರೂ ಅನೇಕ ಕ್ಲಿಷ್ಟ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಬಾಲ್ಯ ವಿವಾಹ ತಡೆಗೆ ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿ ಜಾಗೃತಿ ಹೆಚ್ಚಬೇಕಿದೆ. ಸಂಬಂಧಿಸಿದ ಇಲಾಖೆ, ಮತ್ತು ಸಂಘ-ಸಂಸ್ಥೆಗಳ ಇಚ್ಛಾಶಕ್ತಿ ಹೆಚ್ಚಬೇಕು, ಹಾಗೂ ಅನಿಷ್ಟ ಪದ್ಧತಿಗಳ ಅರಿವು ಮೂಡಿಸುವ ಕೆಲಸಗಳು ಎಲ್ಲಡೇ ನಡೆಯಬೇಕು ಇದಕ್ಕೆ ಪ್ರತಿಯೊಬ್ಬರು ಸಹಕರಿಸಿದರೆ ಮಾತ್ರ ಈ ಅನಿಷ್ಠ ಪದ್ಧತಿಗಳನ್ನು ತಡೆಯಬಹುದಾಗಿದೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ಹಾಗೂ ಕರ್ನಾಟಕ ತಿದ್ದುಪಡಿ ಕಾಯ್ದೆ೨೦೧೬ರಡಿಯಲ್ಲಿ ಕೊಪ್ಪಳ ತಾಲೂಕಿನಲ್ಲಿ ೦೬ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಗಂಗಾವತಿ ತಾಲೂಕಿನ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ೦೮, ಯಲಬುರ್ಗಾ ತಾಲೂಕಿನ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ೦೫, ಕುಷ್ಟಗಿ ತಾಲೂಕಿನ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ೦೫, ದಾಖಲಾಗಿದ್ದು ವಿಚಾರಣೆ ಹಂತದಲ್ಲಿವೆ.

ಎಂಟು ವರ್ಷದಲ್ಲಿ ೪೧೩ ಪ್ರಕರಣಗಳು ಬೆಳಕಿಗೆ : ೨೦೧೧ ರಿಂದ ೨೦೧೮ ರವರೆಗೆ ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕ್ರಮ ಕೈಗೊಂಡ ೨೪ ಪ್ರಕರಣಗಳು, ಬಾಲ್ಯ ವಿವಾಹ ತಡೆದ ೪೧೩ ಪ್ರಕರಣ, ಮಕ್ಕಳ ಕಲ್ಯಾಣ ಸಮಿತಿ ಎದುರು ೩೨೨ ಪ್ರಕರಣ, ಪಾಲಕರಿಗೆ ತಿಳಿವಳಿಕೆ ನೀಡಿ ಬಾಲ್ಯ ವಿವಾಹ ನಿಲ್ಲಿಸಿದ್ದು ೯೧, ಬಾಲ್ಯವಿವಾಹಕ್ಕೆ ಒಳಗಾದ ೨ ಮಕ್ಕಳಿಗೆ ವೃತ್ತಿ ತರಬೇತಿ, ೧೩ ಮಕ್ಕಳ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

– ಮೌಲಾಹುಸೇನ ಬುಲ್ಡಿಯಾರ್

Leave a Reply

Your email address will not be published.