ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು: ವಕೀಲೆ ಸುಭದ್ರಾ ದೇಸಾಯಿ ಸಲಹೆ


ಕೊಪ್ಪಳ : ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ ಮಹಿಳೆಯರು ಶಿಕ್ಷಣವನ್ನು ಪಡೆದು, ನಾಯಕತ್ವ ಗುಣಗಳನ್ನು ರೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುಂತೆ ನ್ಯಾಯವಾದಿ ಸುಭದ್ರಾ ದೇಸಾಯಿ ಸಲಹೆ ನೀಡಿದರು.

ಜಿಲ್ಲೆಯ ಮಾಟಲದಿನ್ನಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ ನವ ದೆಹಲಿ ಹಾಗೂ ಕುಷ್ಟಗಿ ಪಟ್ಟಣದ ಸಮೃದ್ಧಿ ವಿವಿದೊದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಮುಸ್ಲಿಂ ಮಹಿಳೆಯರಿಗಾಗಿ ನಯಿರೋಶನಿ ಯೋಜನೆಯಡಿ ನಾಯಕತ್ವ ತರಬೇತಿ ಒಂದು ವಾರದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿನ ಮಹಿಳೆಯರಿಗೆ ಕಾನೂನು ತಿಳುವಳಿಕೆ ಇಲ್ಲದ ಕಾರಣ ತಮ್ಮ ಮೇಲಾಗುತ್ತಿರುವ ಕೌಟುಂಬಿಕ ದೌರ್ಜನ್ಯ, ಶೋಷಣೆ, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ. ಇಂತಹ ತರಬೇತಿಯಲ್ಲಿ ಮಹಿಳೆಯರ ಕಾನೂನು, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ತಿಳಿಸಿಕೊಡುವ ವಿಷಯವನ್ನು ತಾವುಗಳು ಮೈಗೂಡಿಸಿಕೊಳ್ಳಬೇಕು. ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಸರಕಾರದಿಂದ ಉಚಿತವಾಗಿ ಕಾನೂನು ನೇರವು ದೊರೆಯುತ್ತದೆಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ನಬಿಸಾಬ ಕುಷ್ಟಗಿ ಮಾತನಾಡಿ, ತಾಲೂಕಿನ ಹಿರೇವಂಕಲಕುಂಟಾ ಹಾಗೂ ಗುನ್ನಾಳ ಗ್ರಾಮದಲ್ಲಿ ತಲಾ ೫೦, ಮಾಟಲದಿನ್ನಿ ಗ್ರಾಮದಲ್ಲಿ ೭೫ ಮುಸ್ಲಿಂ ಮಹಿಳೆಯರಿಗೆ ನಯಿರೋಶನಿ ಯೋಜನೆಯಡಿ ಉಚಿತ ಆರೋಗ್ಯ, ಮಹಿಳಾ ಕಾನೂನುಗಳು ಮತ್ತು ಹಕ್ಕುಗಳು, ಸ್ವಚ್ಛತೆ ಹಾಗೂ ಸಾಮಾಜಿಕ ಕೌಟುಂಬಿಕ ನಿರ್ವಹಣೆ, ಉದ್ಯೋಗ ಸೃಷ್ಟಿಸಿಕೊಳ್ಳುವುದರ ಜೊತೆಗೆ ಸರಕಾರದಿಂದ ದೊರೆಯುವ ವಿವಿಧ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗಿದೆ ಎಂದರು.

ಅಲ್ಪ ಸಂಖ್ಯಾತರ ಇಲಾಖೆಯ ಮೋಹಿದ್ದೀನ್ ಖಾಜಿ, ಸಮೃದ್ಧಿ ಸಂಸ್ಥೆಯ ನಿರ್ದೇಶಕಿ ಹಸೀನಾಬಾನು, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಉಪಲದಿನ್ನಿ, ಭೀಮಣ್ಣ ಹವಳಿ, ಗಿರಿಜಾ, ಗ್ರಾಮದ ಮುಖಂಡರಾದ ಹುಸೇನಸಾಬ ಹಾಲಕೇರಿ, ರಾಜೇಸಾಬ, ಬಡೇಸಾಬ ಹಿರೇವಂಕುಂಟಾ ಇನ್ನಿತರರಿದ್ದರು.

Leave a Reply

Your email address will not be published.