ಯಡಿಯೂರಪ್ಪಗೆ ಡೆಡ್ ಲೈನ್ ಕೊಡೋದು ಬಿಟ್ರೆ ಬೇರೆ ಗೊತ್ತಿಲ್ಲ: ಎಂ.ಬಿ. ಪಾಟೀಲ


ಕಲಬುರಗಿ: ಮಾಜಿ ಸಿಎಂ ಯಡಿಯೂರಪ್ಪನವರಿಗೆ ಡೆಡ್ ಲೈನ್ ಕೊಡೋದು ಬಿಟ್ರೆ ಬೇರೆನೂ ಗೊತ್ತಿಲ್ಲ.ಅವರ ಡೆಡ್ ಲೈನ್ ಗಳ ಬಗ್ಗೆ ಕೇಳಿ ಕೇಳಿ ಸಾಕಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಲೇವಡಿ ಮಾಡಿದರು.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಡೆಡ್ ಲೈನ್ ಗಳು ಹೊಸದಲ್ಲ. ಇಂತಹ ಡೆಡ್ ಲೈನ್ ಗಳು ಸಾಕಷ್ಟು ಮುಗಿದಿವೆ. ಇದೀಗ ಲೋಕಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳುತ್ತಿದ್ದಾರೆ.

ಲೋಕಸಭೆಯಲ್ಲಿ ಕರ್ನಾಟಕದಲ್ಲಿ 22 ಸ್ಥಾನ ಗಳಿಸಿದಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮತ್ತೊಂದು ಡೆಡ್ ಲೈನ್ ನೀಡಿದ್ದಾರೆ. ಯಡಿಯೂರಪ್ಪ ಹೇಳಿದಂತೆ 22 ಸೀಟು ಬರೋದು ಬಿಜೆಪಿಗಲ್ಲ, ಕಾಂಗ್ರೆಸ್ 22 ಎಂ.ಪಿ. ಸೀಟ್ ಗೆಲ್ಲಲಿದೆ. ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಿ ಹೊರಹೊಮ್ಮಲಿದ್ದಾರೆ. ಯಡಿಯೂರಪ್ಪ ಅವರ ಕನಸು ಹಗಲು ಕನಸಾಗಿಯೇ ಉಳಿಯಲಿದೆ ಎಂದು ಎಂ.ಬಿ.ಪಾಟೀಲ ಎಂದು ಹೇಳಿದರು.

ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ, ಜಾಧವ್ ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುತ್ತಾರೆ ಎನ್ನುವುದೂ ಕೇವಲ ಊಹಾಪೋಹ. ಅಲ್ಲದೆ ಉಮೇಶ್ ಜಾಧವ್ ಬೀದರ್ ಲೋಕಸಭಾ ವ್ಯಾಪ್ತಿಗೆ ಬರಲಿದ್ದು, ಕಲಬುರ್ಗಿ ಲೋಕಸಭೆಗೂ ಅವರಿಗೆ ಸಂಬಂಧ ಬರೋದಿಲ್ಲ ಎಂದರು.

ಆಫರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ.ಟಿ ತನಿಖಾ ತಂಡ ರಚನೆ ಒಂದಷ್ಟು ವಿಳಂಬವಾಗುತ್ತಿದ್ದು, ಹಾಗೆಂದು ಸರ್ಕಾರ ಪ್ರಕರಣವನ್ನು ಹಗುರವಾಗಿ ಪರಿಗಣಿದೆ ಎಂದರ್ಥವಲ್ಲ ಎಂದು ತಿಳಿಸಿದರು.

ತನಿಖೆಗೆ ಸೂಕ್ತ ತಂಡವನ್ನು ಸಿದ್ಧತೆ ಮಾಡುತ್ತಿದೆ. ಎಸ್.ಐ.ಟಿ. ತನಿಖೆಗೆ ಮುಖ್ಯಮಂತ್ರಿ ನಿರಾಸಕ್ತಿ ಎಂಬ ವಿಚಾರ ಆಧಾರ ರಹಿತವಾದದ್ದು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಒಪ್ಪಿ ಎಸ್.ಐ.ಟಿ. ತನಿಖೆಗೆ ಆದೇಶಿಸಿದ್ದಾರೆ. ಎಸ್.ಐ.ಟಿ.ಗೆ. ಸಿಎಂ ವಿರೋಧ ಎಂಬುದು ಕೇವಲ ಮಾಧ್ಯಗಳ ಸೃಷ್ಟಿ ಎಂದರು. ಅಪರೇಷನ್ ಆಡಿಯೋ ಘಟನೆಗೆ ಸಂಬಂಧಿಸಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದ ತನಿಖೆಗೆ ಕಲಬುರ್ಗಿ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆಯಜ್ಞೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ, ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿರುವುದಕ್ಕೂ ಎಸ್.ಐ.ಟಿ. ತನಿಖೆಗೂ ಸಂಬಂಧವಿಲ್ಲ. ಎಸ್.ಐ.ಟಿ. ತನಿಖೆಯೇ ಬೇರೆಯಾಗಿದೆ. ಶೀಘ್ರವೇ ಎಸ್.ಐ.ಟಿ. ತನಿಖೆ ಪ್ರಾರಂಭಗೊಳ್ಳಲಿದೆ ಎಂದರು.

ಯಡಿಯೂರಪ್ಪ ಅವರು ಅಪರೇಷನ್ ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಹೈಕೋರ್ಟ್ ನಲ್ಲಿ ಅವರ ಪರ ವಕೀಲರು 10 ಕೋಟಿ ರೂಪಾಯಿ ಲಂಚವಲ್ಲ, ಚುನಾವಣೆ ಖರ್ಚಿಗಾಗಿ ಎಂದು ಹೇಳಿದ್ದಾರೆ. ಚುನಾವಣಾ ಆಯೋಗ ವಿಧಾನ ಸಭೆ ಚುನಾವಣೆಗೆ 25 ವೆಚ್ಚದ ಮಿತಿ ಹಾಕಿದೆ. ಹೀಗಿರಬೇಕಾದರೆ 10 ಕೋಟಿ ರೂಪಾಯಿ ಚುನಾವಣಾ ವೆಚ್ಚಕ್ಕಾಗಿ ಮುಂಗಡವಾಗಿ ಕೊಡುತ್ತಾರೆ ಎಂದರೆ ಅದರರ್ಥ ಉಳಿದ 9.75 ಕೋಟಿ ರೂಪಾಯಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಒಡ್ಡಿದ ಆಮಿಷದ ಹಣ ಎಂದು ಪಾಟೀಲ ಅಭಿಪ್ರಾಯಪಟ್ಟರು. ನ್ಯಾಯಾಲಯದ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಮುಂದಿನ ದಿನಗಳಲ್ಲಿ ಅದರ ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು.

Leave a Reply

Your email address will not be published.