ಮಾಸ್ತಿಗುಡಿ ಗಿರಿಜನರಿಗೆ ಶೀಘ್ರ ಕೃಷಿ ಭೂಮಿ ಹಸ್ತಾಂತರ: ಸಚಿವ ಸತೀಶ ಜಾರಕಿಹೊಳಿ ಭರವಸೆ


ಮೈಸೂರು:  ಎಚ್. ಡಿ ಕೋಟೆ ತಾಲೂಕಿನ  ಮಾಸ್ತಿಗುಡಿ ಗಿರಿಜನ ಪುನರ್ ವಸತಿ ಕೇಂದ್ರವನ್ನು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಇಂದು ಉದ್ಘಾಟಸಿದರು.

ಬಳಿಕ  ಮಾತನಾಡಿದ ಅವರು, ಸ್ವಯಂ ಪ್ರೇರಿತವಾಗಿ ಕಾಡನ್ನು ಬಿಟ್ಟು ನಾಡಿನಲ್ಲಿ ವಾಸಿಸಲು ಬಯಸುವ ಜನರಿಗೆ ಸರಕಾರದಿಂದ ವಸತಿ ಸೇರಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಈಗಾಗಲೇ ಗ್ರಾಮಗಳಲ್ಲಿ ಗಿರಿಜನರಿಗಾಗಿ  ಮೂಲಸೌಕರ್ಯ ಕಲ್ಪಿಸಲಾಗಿದೆ. ಮಾಸ್ತಿಗುಡಿಯಲ್ಲಿಯೂ ಅಚ್ಚುಕಟ್ಟಾಗಿ ವಸತಿ ಕಟ್ಟಡ  ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ  ಅಚ್ಚುಕಟ್ಟಾದ ರಸ್ತೆ ಹಾಗೂ ಅಂಗನವಾಡಿಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ  ತಿಳಿಸಿದರು.

ಕೃಷಿ ಭೂಮಿ, ಅಂಗನವಾಡಿ, ರೇಷನ್ ಕಾರ್ಡ್ ಸೇರಿದಂತೆ ಹಲವು ಬೇಡಿಕೆಗಳನ್ನು ಜನರು ತಮ್ಮ ಗಮನಕ್ಕೆ ತಂದಿದ್ದು, ಬರುವ ಜೂನ್ ಅಥವಾ ಜುಲೈ ತಿಂಗಳಲ್ಲಿ  ಕೃಷಿ ಜಮೀನು ಹಸ್ತಾಂತರಿಸಲಾಗುವುದು. ಮೂಲಭೂತ ಸೌಕರ್ಯ ಕಲ್ಪಿಸಲು  ಬದ್ದ ಎಂದು ತಿಳಿಸಿದ ಸಚಿವರು, ರಾತ್ರಿ ಹಗಲು ದುಡಿದರೆ  ಬಡವರ ಹೊಟ್ಟೆ ತುಂಬಲು ಸಹಕಾರಿಯಾಗುತ್ತದೆ, ಜತೆಗೆ ಅವರ ಆದಾಯ ಪಡೆಯಲು ಸಹಕಾರಿಯಾಗುತ್ತದೆ. ಕೃಷಿ ಅಧಿಕಾರಿಗಳನ್ನು ಕರೆಸಿ ಕೃಷಿಗೆ ಬಳಕೆ ಇರುವ ಜಮೀನು ಸರ್ವೆ ಮಾಡಿಸಿ  ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ, ಅಲ್ಲಿನ ಜನಪ್ರತಿನಿಧಿಗಳಿಗೆ ಸಚಿವರು ಸೂಚಿಸಿದರು.

Leave a Reply

Your email address will not be published.