ಅರಣ್ಯ ಇಲಾಖೆಯಲ್ಲಿ 30 ಜನರಿಗೆ ಶೀಘ್ರ ಅನುಕಂಪ ಆಧಾರದ ನೌಕರಿ: ಸತೀಶ ಜಾರಕಿಹೊಳಿ


ಧಾರವಾಡ: ಅರಣ್ಯ ಇಲಾಖೆಯಲ್ಲಿ  ಶೀಘ್ರದಲ್ಲಿಯೇ 30 ಜನರಿಗೆ ಅನುಕಂಪ ಆಧಾರಿತ ನೌಕರಿ ನೀಡಲಾಗುವುದು ಎಂದು ಅರಣ್ಯ ಖಾತೆ ಸಚಿವ ಸತೀಶ ಜಾರಕಿಹೊಳಿ ಪ್ರಕಟಿಸಿದ್ದಾರೆ.

ಅರಣ್ಯ ಇಲಾಖೆ ಆಶ್ರಯದಲ್ಲಿ ಇಲ್ಲಿಯ ಅರಣ್ಯ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ವಲಯ ಅರಣ್ಯಾಧಿಕಾರಿಗಳ ನಾಲ್ಕನೇ ಬ್ಯಾಚಿನ  ಬುನಾದಿ ತರಬೇತಿ ಮುಕ್ತಾಯ ಸಮಾರಂಭ ಹಾಗೂ ಮೂಲಸೌಕರ್ಯಗಳ  ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರವಿವಾರ ಅವರು ಮಾತನಾಡಿದರು.

ಇಲಾಖೆಯಲ್ಲಿ ಅನುಕಂಪ ಆಧಾರಿತ ನೌಕರಿಯ 40 ಪ್ರಕರಣಗಳು ಬಹುದಿನಗಳಿಂದಲೂ ಬಾಕಿ ಉಳಿದಿವೆ. ಸದಸ್ಯಕ್ಕೆ ಈ ತಿಂಗಳಾಂತ್ಯದಲ್ಲಿ 30 ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಲಾಗಿದ್ದು, ಎಲ್ಲಾ 30 ಮಂದಿಗೆ ಅವರ ಮನೆಗಳಿಗೇ ತೆರಳಿ ನೌಕರಿ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಇನ್ನೂ ಹತ್ತು ಪ್ರಕರಣಗಳನ್ನೂ ಶೀಘ್ರವೇ ಇತ್ಯರ್ಥಗೊಳಿಸಲಾಗುವುದು  ಎಂದೂ ಅವರು ಭರವಸೆ ನೀಡಿದರು.

ಇನ್ನುಳಿದಂತೆ ಸಿಬ್ಬಂದಿಯ ವೇತನ ಹೆಚ್ಚಳ, ಬಡ್ತಿ ವಿಚಾರದಲ್ಲಿಯೂ ಸಾಕಷ್ಟು ಸಮಸ್ಯೆಗಳಿದ್ದು, ಅವೆಲ್ಲವುಗಳನ್ನು ಬಗೆಹರಿಸಲು ಗಂಭೀರ ಚಿಂತನೆ ನಡೆದಿದೆ. ವೇತನ ಹೆಚ್ಚಳ ಕುರಿತಾದ ಕಡತ ಈಗಾಗಲೇ ಸಿದ್ದಗೊಂಡಿದ್ದು, ಅನುಮೋದನೆಗಾಗಿ ಕಾಯಲಾಉತ್ತಿದೆ. ಇಲಾಕೆಯ ನೌಕರರಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸಲು ತಾವು ಬದ್ಧ ಎಂದರು.

ವನ್ಯಜೀವಿಗಳು -ಮಾನವ ಸಂಘರ್ಷದ ಜತೆಗೆ ಅರಣ್ಯ ಇಲಾಖೆಯು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೂ ಸಂಘರ್ಷ ನಡೆಸುವ ಅನಿವಾರ್ಯತೆಗಳನ್ನು ಎದುರಿಸುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳ ವಿಚಾರ ಬಂದಾಗ ಜಾಗೆ ಬಿಟ್ಟು ಕೊಡಲು ಕಾನೂನಿನಲ್ಲಿ ಅವಕಾಶವಿದ್ದು, ಈ ಕುರಿತಂತೆ ಜನಪ್ರತಿನಿಧಿಗಳು ಸರಿಯಾದ ಮಾರ್ಗದಲ್ಲಿ ಪರವಾನಿಗೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಅವರು ಸಲಹೆ ಮಾಡಿದರು.

ಅರಣ್ಯ ಪ್ರದೇಶ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಅರಣ್ಯ ಸಂರಕ್ಷಣೆಯೆ ಜತೆಗೆ ಅರಣ್ಯ ಬೆಳೆಸುವ ಕೆಲಸಕ್ಕೆ ಅಧಿಕಾರಿಗಳು ಆದ್ಯತೆ ಕೊಡಬೇಕು. ಈಗಿರುವ ಶೇ. 16 ರಿಂದ 18 ರಷ್ಟಿರುವ ಅರಣ್ಯಪ್ರದೇಶವನ್ನು ಶೇ. 36  ಕ್ಕೆ ವಿಸ್ತರಿಸುವ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಸೂಚಿಸಿದರು.

ಸದ್ಯ ತರಬೇತಿ ಪಡೆದುಕೊಂಡು ಹೊರಹೋಗುತ್ತಿರುವ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೆಂಬ ನಂಬಿಕೆ ತಮಗಿದೆ. ಧಾರವಾಡದಲ್ಲಿರುವ ತರಬೇತಿ ಸಂಸ್ಥೆಯು 1996 ರಲ್ಲಿ ಕಾರ್ಯಾರಂಭ ಮಾಡಿದ್ದು, ಇದುವರೆಗೆ ನಾಲ್ಕು ಬ್ಯಾಚುಗಳಿಗೆ  ತರಬೇತಿ ನೀಡಿದೆ. ಇಲ್ಲಿಯ ಮೂಲ ಸೌಕರ್ಯಗಳು ಇಡೀ ದೇಶದ ಗಮನವನ್ನೇ ಸೆಳೆದಿವೆ.  ಈ ಕೇಂದ್ರವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಹೇಳಿದರು.

ಶಾಸಕ ಅಮೃತ ದೇಸಾಯಿ, ಅಧಿಕಾರಿಗಳಾದ ಶ್ರೀಧರ, ದೀಪಾ, ರಾಧಾದೇವಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಇತರೆ ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.