ಚುನಾವಣೆ ನಿಯಮ ಉಲ್ಲಂಘಿಸಿದರೆ ಹೋಟೆಲ್, ಬಾರ್-ರೆಸ್ಟೋರೆಂಟ್ ಚಿತ್ರಮಂದಿರ ಮಾಲೀಕರ ಲೈಸೆನ್ಸ್ ರದ್ದು: ಡಾ.ರಾಜೇಂದ್ರ ಎಚ್ಚರಿಕೆ

ಬೆಳಗಾವಿ: ಮಾದರಿ ನೀತಿಸಂಹಿತೆ ಉಲ್ಲಂಘಿಸುವ ಜಿಲ್ಲೆಯ ಹೋಟೆಲ್, ಬಾರ್-ರೆಸ್ಟೋರೆಂಟ್, ಚಿತ್ರಮಂದಿರಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಲೈಸೆನ್ಸ್ ಕೂಡ ರದ್ದುಪಡಿಸಲಾಗುವುದು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ರಾಜೇಂದ್ರ ಕೆ.ವಿ ಅವರು ಎಚ್ಚರಿಕೆ ನೀಡಿದರು.

ಮಾದರಿ ನೀತಿಸಂಹಿತೆ ಪಾಲನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ ನಡೆದ ಹೋಟೆಲ್, ಬಾರ್-ರೆಸ್ಟೋರೆಂಟ್, ಚಲನಚಿತ್ರ ಮಂದಿರ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿದರು. ಹೋಟೆಲ್ ಮತ್ತು ಬಾರ್‍ಗಳಲ್ಲಿ ಟೋಕನ್‍ಗಳ ಆಧಾರದ ಮೇಲೆ ವ್ಯವಹಾರ ನಡೆಸುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಯಾವುದೇ ರೀತಿಯ ಅಕ್ರಮಗಳು ಕಂಡು ಬಂದರೆ ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಥವಾ ಚುನಾವಣಾ ವೀಕ್ಷಕ ತಂಡಗಳಿಗೆ ಮಾಹಿತಿ ನೀಡಬೇಕು.

ಚುನಾವಣೆಯನ್ನು ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದೆ. ಅದೇ ರೀತಿ ವ್ಯಾಪಾರ-ವಹಿವಾಟುದಾರರು ತಮ್ಮ ವ್ಯವಹಾರದ ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸುವಂತೆ ಮನವಿ ಮಾಡಿಕೊಂಡರು. ಕಲ್ಯಾಣ ಮಂಟಪಗಳಲ್ಲಿ ಮದುವೆ, ಹುಟ್ಟುಹಬ್ಬ, ವಾರ್ಷಿಕೋತ್ಸವ ಮತ್ತಿತರ ಕೌಟುಂಬಿಕ ಮತ್ತು ಖಾಸಗಿ ಸಮಾರಂಭಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಈ ಸಮಾರಂಭಗಳ ನೆಪದಲ್ಲಿ ರಾಜಕೀಯ ಕಾರ್ಯಕರ್ತರಿಗೆ ಬಾಡೂಟ ಮತ್ತಿತರ ವ್ಯವಸ್ಥೆ ಮಾಡಿರುವುದು ಕಂಡು ಬಂದರೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಡಾ. ರಾಜೇಂದ್ರ ಎಚ್ಚರಿಕೆ ನೀಡಿದರು.

ಮಾರಾಟ-ದಾಸ್ತಾನು ವರದಿ ಕಡ್ಡಾಯ:
ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಅರುಣಕುಮಾರ್ ಮಾತನಾಡಿ, ಅಬಕಾರಿ ಲೈಸೆನ್ಸ್ ಹೊಂದಿರುವ ಬಾರ್ -ರೆಸ್ಟೋರೆಂಟ್ ಗಳು ನಿಗದಿತ ಸಮಯದಂತೆ ವಹಿವಾಟು ನಡೆಸಬೇಕು ಹಾಗೂ ದೈನಂದಿನ ಮಾರಾಟ ಮತ್ತು ದಾಸ್ತಾನುಗಳ ಕುರಿತು ನಿಗದಿತ ನಮೂನೆಯಲ್ಲಿ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಬಾರ್ ಮತ್ತು ರೆಸ್ಟೋರೆಂಟ್‍ಗಳ ಮಾಲೀಕರು ಹಾಗೂ ವ್ಯವಸ್ಥಾಪಕರುಗಳಿಗೆ ಸೂಚನೆ ನೀಡಿದರು.
ಅಬಕಾರಿ ಇಲಾಖೆಯು ನೀಡಿರುವ ಲೈಸೆನ್ಸ್ ನಿಯಮಾವಳಿಗಳನ್ನು ಮೀರಿ ಅಕ್ರಮವಾಗಿ ವ್ಯವಹಾರ ನಡೆಸಿದರೆ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಠಡಿ ನೀಡುವಾಗ ಮತದಾರರ ಚೀಟಿ ಕಡ್ಡಾಯ:
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಮತದಾನದ 48 ಗಂಟೆಗಳ ಮುಂಚೆ ವಸತಿಗೃಹಗಳಲ್ಲಿ ಯಾರಿಗಾದರೂ ಕೊಠಡಿ ನೀಡುವಾಗ ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿಯನ್ನೇ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮತದಾರರ ಚೀಟಿ ಪಡೆಯುವುದರಿಂದ ಸದರಿ ವ್ಯಕ್ತಿಗಳು ಯಾವ ಮತಕ್ಷೇತ್ರದ ನಿವಾಸಿ ಎಂಬುದು ತಿಳಿಯುವುದು ಸಾಧ್ಯವಾಗಲಿದೆ ಎಂದರು. ಕಲ್ಯಾಣ ಮಂಟಪ ಮತ್ತು ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆಯುವ ಮದುವೆ, ಹುಟ್ಟುಹಬ್ಬ ಅಥವಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅಂತಹ ಸಂದರ್ಭದಲ್ಲಿ ರಾಜಕೀಯ ಕಂಡು ಬಂದರೆ ತಕ್ಷಣ ಮಾಹಿತಿ ನೀಡುವ ಮೂಲಕ ಮಾದರಿ ನೀತಿಸಂಹಿತೆ ಪಾಲನೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಿವಿಜಿಲ್ ಕಣ್ಗಾವಲು:
ಚುನಾವಣಾ ಜಾಹೀರಾತು ಪ್ರಚಾರ ಮಾಡಬೇಕಾದರೆ ಎಂಸಿಎಂಸಿ ಪ್ರೀಸರ್ಟಿಫಿಕೇಶನ್ ಕಡ್ಡಾಯವಾಗಿದೆ. ಆದ್ದರಿಂದ ಯಾವುದೇ ರೀತಿಯ ಚುನಾವಣಾ ಜಾಹೀರಾತು ಪ್ರಚಾರ ಪ್ರದರ್ಶಿಸುವಾಗ ಪೂರ್ವಾನುಮತಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದು ಚಲನಚಿತ್ರ ಮಂದಿರಗಳ ಮಾಲೀಕರು ಹಾಗೂ ಕೇಬಲ್ ಆಪರೇಟರ್‍ಗಳಿಗೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು. ಚುನಾವಣಾ ಅಕ್ರಮಗಳು ಕಂಡುಬಂದರೆ ನಾಗರಿಕರೇ ಛಾಯಾಚಿತ್ರಗಳು ಅಥವಾ ವಿಡಿಯೋ ಸಮೇತ ನೇರವಾಗಿ ಚುನಾವಣಾ ಆಯೋಗಕ್ಕೆ ಸಿವಿಜಿಲ್ ಆಪ್ ಮೂಲಕ ದೂರು ಸಲ್ಲಿಸಬಹುದು.
ಪ್ರತಿಯೊಬ್ಬರು ಚುನಾವಣಾ ಅಕ್ರಮಗಳ ಬಗ್ಗೆ ದೂರು ಸಲ್ಲಿಸುವ ಅವಕಾಶಗಳಿರುವುದರಿಂದ ಎಲ್ಲೇ ನೀತಿಸಂಹಿತೆ ಉಲ್ಲಂಘನೆ ಆದರೂ ಆಯೋಗದ ಗಮನಕ್ಕೆ ಬರಲಿದೆ ಎಂದು ವಿವರಿಸಿದರು.

ಪ್ರೋಬೇಷನರಿ ಐಎಎಸ್ ಅಧಿಕಾರಿ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ರಮೇಶ್ ಕಳಸದ, ಮಹಾನಗರ ಪಾಲಿಕೆ ಆಯುಕ್ತರಾದ ಇಬ್ರಾಹಿಂ ಮೈಗೂರ್, ಎಂಸಿಸಿ ನೋಡಲ್ ಅಧಿಕಾರಿ ಜಗದೀಶ್ ರೂಗಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸಲಾಪುರೆ, ಹಾಗೂ ಚಲನಚಿತ್ರ ಪ್ರದರ್ಶಕ ಸಂಘದ ಅವಿನಾಶ ಪೊತದಾರ, ಹೋಟೆಲ್ ಮಾಲೀಕರ ಸಂಘದ ವಿಠ್ಠಲ ಹೆಗಡೆ, ಜಿಲ್ಲೆಯ ಬಾರ್ ಮತ್ತು ರೆಸ್ಟೋರೆಂಟ್, ಚಿತ್ರಮಂದಿರಗಳು, ಕಲ್ಯಾಣ ಮಂಟಪಗಳ ಮಾಲೀಕರು ಮತ್ತು ವ್ಯವಸ್ಥಾಪಕರು ಉಪಸ್ಥಿತರಿದ್ದರು.

Leave a Reply

Your email address will not be published.