ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಒಬ್ಬ ಸಾವು, 100 ಮಂದಿ ಅವಶೇಷಗಳಡಿ !!

ಧಾರವಾಡ: ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದು ಕುಸಿದು ಧಾರವಾಡದಲ್ಲಿ ಮಂಗಳವಾರ ಭಾರೀ ಅನಾಹುತ ಸಂಭವಿಸಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿ ನೂರಕ್ಕೂ ಹೆಚ್ಚು ಜನ ಅವಶೇಷಗಳಡಿ ಸಿಕ್ಕಿರುವ ಶಂಕೆ ಉಂಟಾಗಿದೆ.

ಕುಮಾರೇಶ್ವನಗರದಲ್ಲಿ ನಿರ್ಮಾಣಹಂತದಲ್ಲಿರುವ ಐದಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದದ್ದೇ ಈ ದುರಂತಕ್ಕೆ ಕಾರಣವಾಗಿದೆ.

ಐದು ಅಂತಸ್ತಿನ ಉದ್ದೇಶಿತ ಕಟ್ಟಡದಲ್ಲಿ ಎರಡು ಅಂತಸ್ತುಗಳು ನಿರ್ಮಾಣವಾಗಿದ್ದು, ಮೂರನೇ ಅಂತಸ್ತಿನ ಕಾಮಗಾರಿ ನಡೆದಿತ್ತು. ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು , ಮೊದಲ ಎರಡು ಅಂತಸ್ತುಗಳಲ್ಲಿ ಚಹಾ ಅಂಗಡಿ, ಝೆರಾಕ್ಸ್ ಸೆಂಟರ್ ಮತ್ತಿತರ ಅಂಗಡಿ, ಕಚೇರಿಗಳಿಗೆ ಬಾಡಿಗೆ ನೀಡಲಾಗಿತ್ತು.

ಈ ಕಟ್ಟಡ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾವನಿಗೆ ಸೇರಿದ್ದೆನ್ನಲಾಗಿದ್ದು, ಕಳಪೆ ಕಾಮಗಾರಿಯೇ ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, 3 ಅಗ್ನಿಶಾಮಕ ವಾಹನಗಳು, ನಾಲ್ಕು ಜೆಸಿಬಿಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಹತ್ತು ಅಂಬುಲೆನ್ಸ್ ಗಳು ಸಜ್ಜಾಗಿ ನಿಂತಿದ್ದು, ಇಬ್ಬರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

Your email address will not be published.