ಬಸವತತ್ವದ ಮೇಲೆ ಅಧಿಕಾರ ನಡೆಸಿದ ಸಿದ್ದು ಸರಕಾರ: ಸಿ.ಎಂ. ಇಬ್ರಾಹಿಂ ಬಣ್ಣನೆ


ಚಾಮರಾಜನಗರ: ಬಸವ ತತ್ವಗಳ ಆಧಾರದ ಮೇಲೆ ಆಡಳಿತ ನಡೆದಿದ್ದರೆ ಅದು ಸಿದ್ದರಾಮಯ್ಯ ಸರಕಾರ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಪ್ರತಿಪಾದಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿಯ ಅಂಬೇಡ್ಕರ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಇಬ್ರಾಹಿಂ , ಸಮಾನತೆಯ ತತ್ವದ ಮೇಲೆ ಜನಪ್ರಿಯ ಸರಕಾರ ನಡೆಸಿಕೊಟ್ಟವರು ಸಿದ್ದರಾಮಯ್ಯ ಎಂದು ಶ್ಲಾಘಿಸಿದರು.

ಬಿಜೆಪಿಗೂ ಬಸವತತ್ವಕ್ಕೂ ಸಂಬಂಧವೇ ಇಲ್ಲ. ರಾಜ್ಯದ ಕೋಟ್ಯಂತರ ಬಡವರು ನೆಮ್ಮದಿಯಿಂದ ಊಟ ಮಾಡಿ ಮಲಗುವಂತೆ ಅವಕಾಶ ಮಾಡಿಕೊಟ್ಟಿದ್ದು ಸಿದ್ದರಾಮಯ್ಯ ಸರಕಾರ. ಮೋದಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ವಿದೇಶಗಳಿಗೆ  ಸುತ್ತುವುದನ್ನು ಬಿಟ್ಟರೆ ಬೇರೆ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಹಿಂದಿನ ಕಾಲದಲ್ಲಿ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ ಎಂದು ದುಡ್ಡು ಸಂಗ್ರಹಿಸಿಡುತ್ತಿದ್ದರು. ಮೋದಿ ದುಡ್ಡಿಗೆ ಕಷ್ಟಕಾಲ ಬರುವಂತಹ ಪರಿಸ್ಥಿತಿ ತಂದಿತ್ತರು ಎಂದು ಇಬ್ರಾಹಿಂ ನೋಟು ನಿಷೇಧ ವಿಚಾರವನ್ನು ಟೀಕಿಸಿದರು.

ಮೋದಿ ಒಬ್ಬ ವಿವೇಚನೆ ಇಲ್ಲದ ಪ್ರಧಾನಿ ಎಂದೂ ಟೀಕಿಸಿದ ಅವರು ರಾಷ್ಟ್ರೀಯ ಮಾಧ್ಯಮಗಳು ಈ ವಿಚಾರವನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಚಾಮರಾಜನಗರಕ್ಕೆ ತಾವು 25 ವರ್ಷಗಳಿಂದಲೂ ಭೇಟಿ ನೀಡುತ್ತಿರುವುದಾಗಿ ಹೇಳಿದ ಅವರು, ಜಿಲ್ಲೆಯಲ್ಲಿ ಅತ್ಯಂತ ಸಜ್ಜನ ಮುಖಂಡರಿದ್ದಾರೆ. ಈ ಬಾರಿ ಧ್ರುವನಾರಾಯಣ ಅವರಿಗೆ ಮತ್ತೊಮ್ಮೆ ಅವಕಾಶ ಕೊಡುವ ಮೂಲಕ ಅಭಿವೃದ್ಚಧಿ ಮಂತ್ರ ಪಠಿಸುವಂತೆ ಸಲಹೆ ಮಾಡಿದರು.

Leave a Reply

Your email address will not be published.