ಲೋಕಪಾಲ ಆಯ್ಕೆ ಸಮಿತಿ ಸಭೆಗೆ ಮತ್ತೊಮ್ಮೆ ಬರೋದಿಲ್ಲ ಎಂದ್ರು ಖರ್ಗೆ !


ಹೊಸದಿಲ್ಲಿ: ಲೋಕಪಾಲ ರಚನೆಗಾಗಿ ಕರೆದಿದ್ದ ಸಭೆಗೆ ಹಾಜರಾಗಲು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೆ ನಕಾರ ಹೇಳಿದ್ದಾರೆ.

“ವಿಶೇಷ ಆಹ್ವಾನಿತರಾಗಿ” ಕರೆದು, ಪ್ರಮುಖ ವಿಷಯದಲ್ಲಿ ಪ್ರತಿಪಕ್ಷಗಳನ್ನು “ಧ್ವನಿಯಿಲ್ಲದಂತೆ” ಮಾಡಲಾಗುತ್ತದೆ ಎಂಬ ಕಾರಣಕ್ಕೆ ಈ ಆಹ್ವಾನವನ್ನು ನಾನು ಒಪ್ಪುವುದಿಲ್ಲ ಎಂದು ಖರ್ಗೆ ಪುನರುಚ್ಛರಿಸಿದ್ದಾರೆ.

“ವಿಶೇಷ ಆಹ್ವಾನಿತ” ಎಂದು ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಲೋಕಪಾಲ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿಶೇಷ ಆಹ್ವಾನಿತರಿಗೆ ಹಕ್ಕು ಇರುವುದಿಲ್ಲ ಎಂದಿದ್ದಾರೆ.

ಲೋಕಪಾಲ ಆಯ್ಕೆ ಸಮಿತಿಯ ಸಭೆಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಮಾ.15ರಂದು ಏರ್ಪಡಿಸಿದೆ.

2018ರಲ್ಲಿಯೂ ಇದೇ ರೀತಿಯ ಆಹ್ವಾನವನ್ನು ಮಲ್ಲಿಕಾರ್ಜುನ ಖರ್ಗೆ ಅವರು 6 ಬಾರಿ ತಿರಸ್ಕರಿಸಿದ್ದರು.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಅವರು, “ಲೋಕಪಾಲ ಕಾಯಿದೆಯ 4(2) ಅನುಬಂಧದ ಪ್ರಕಾರ, ಪ್ರತಿಪಕ್ಷದ ನಾಯಕನ ಅನುಪಸ್ಥಿತಿಯಲ್ಲಿಯೂ ಲೋಕಪಾಲರನ್ನು ಆಯ್ಕೆ ಮಾಡಲು ಸರಕಾರಕ್ಕೆ ಅಧಿಕಾರವಿದೆ ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ಹೀಗಿದ್ದರೂ, ಕಳೆದ ಐದು ವರ್ಷಗಳಲ್ಲಿ ಲೋಕಪಾಲರ ನೇಮಕವಾಗದಿರಲು ನಮ್ಮ ಗೈರುಹಾಜರಾತಿಯನ್ನೇ ನೆಪ ಒಡ್ಡಲಾಗುತ್ತಿದೆ” ಎಂದು ತಿಳಿಸಿದ್ದಾರೆ

Leave a Reply

Your email address will not be published.