ಗವಿಶ್ರೀಗಳ ನೇತೃತ್ವದಲ್ಲಿ ಮುಂದುವರೆದ ಹಿರೇಹಳ್ಳ ಪುನಶ್ಚೇತನ ಕಾರ್ಯ


ಹಿರೇಹಳ್ಳ, ಕೋಳುರು, ಕಾಟ್ರಳ್ಳಿ, ಭಾಗ್ಯನಗರದ ಸುತ್ತಮುತ್ತ ಸ್ವಚ್ಛತಕಾರ್ಯ

ಕೊಪ್ಪಳ : ಹಿರೇಹಳ್ಳದ ಪುನಶ್ಚೇತನ ಕಾರ್ಯವು ದಿನದಿಂದ ದಿನಕ್ಕೆ ಭರದಿಂದ ಸಾಗಿ ಅತ್ಯಂತ ತ್ವರಿತಗತಿಯಾಗಿ ಕೆಲಸಗಳು ಜರುಗುತ್ತಲಿವೆ. ಇಂದು ಹಿರೇಹಳ್ಳ, ಕೋಳುರು, ಕಾಟ್ರಳ್ಳಿ ಹಾಗೂ ಭಾಗ್ಯನಗರದ ಸುತ್ತಮುತ್ತ ಇರುವ ಹಸಿರು ಪಾಚಿ, ಕೆಸರು, ಮುಳ್ಳುಕಂಟಿಗಳು, ಜಾಲಿಮರಗಳು ಹಾಗೂ ಕಸಕಡ್ಡಿಗಳನ್ನು ತೆಗೆದು ಹಾಕಿ ಸ್ವಚ್ಚಗೊಳಿಸುವ ಕಾರ್ಯ ಮುಂದುವರೆದಿದೆ.

ಈ ಕಾರ್ಯದಲ್ಲಿ 11 ಇಟ್ಯಾಚಿ, 2 ಜೆ ಸಿ. ಬಿ. 1 ಡೋಜರ್ ಹಾಗೂ 2 ಟ್ರ್ಯಾಕ್ಟರ್ಗಳನ್ನು ಸ್ವಚ್ಛತಾಕಾರ್ಯದಲ್ಲಿ ನಿರಂತರ ಕೆಲಸದಲ್ಲಿದ್ದು, ಹಿರೇಹಳ್ಳ ಯೋಜನಾ ಅಭಿಯಂತರರಾದ ಬಸವರಾಜ ಬಂಡಿವಡ್ಡರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲಿಸಿದರು. ಅಲ್ಲದೇ ಮುಂದಿನ ಯೋಜನೆಗಳ ಬಗ್ಗೆ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಪರಿಣಿತರು ಹಳ್ಳಿಯಿಂದ ಹಳ್ಳಿಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಬ್ರಿಡ್ಜ ಕಂ ಬ್ಯಾರೇಜ್, ಚೆಕ್ ಡ್ಯಾಂಗಳನ್ನು ನಿರ್ಮಿಸುವ ಕುರಿತು ಪೂಜ್ಯ ಗವಿಶ್ರೀ ಗಳೊಂದಿಗೆ ಚರ್ಚಿಸಿದರು.

ಕಳೆದ ಎಂಟುದಿನಗಳಿಂದ ನಡೆದಿರುವ ಸ್ವಚ್ಛತ ಕಾರ್ಯದಿಂದ ಹಿರೇಹಳ್ಳದ ಸುತ್ತ ಮುತ್ತಲಿನ ಪ್ರದೇಶ ಆಕರ್ಷಕವಾಗಿ, ವಿಶಾಲವಾಗಿ ಕಾಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಶಿಸ್ತು ಹಾಗೂ ಆಕರ್ಷಕವಾಗಿ ಕಂಗೊಳಿಸುತ್ತದೆ. ಈ ಕಾರ್ಯದಲ್ಲಿ ಪೂಜ್ಯರೊಂದಿಗೆ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಸೇವೆ ಸಲ್ಲಿಸಿದರು.

ಬಾಗಲಕೋಟಿ ಜಿಲ್ಲೆಯ ಮೋರನಾಳ್ ಗ್ರಾಮದ ಶ್ರೀಮತಿ ನೂರ್ ಜಹಾನ್ ಹುಸೇನ್ ಸಾಬ್ ರೊಳ್ಳಿ ಇವರಿಂದ ದೇಣಿಗೆ- ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಜರುಗಿದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಾಗಲಕೋಟಿ ಜಿಲ್ಲೆಯ ಮೋರನಾಳ್ ಗ್ರಾಮದ ಶ್ರೀಮತಿ ನೂರ್ ಜಹಾನ್ ಹುಸೇನ್ ಸಾಬ್ ರೊಳ್ಳಿ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇವರಿಗೆ “ ಶ್ರೇಷ್ಠ ಕೃಷಿ ಮಹಿಳೆ” ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಲಾಯಿತು. ನಂತರ ಗವಿಮಠಕ್ಕೆ ಆಗಮಿಸಿದ ನೂರಜಹಾನ್ ಹುಸೇನ್ ಸಾಬ್ ರೊಳ್ಳಿ ಇವರು ಪೂಜ್ಯ ಶ್ರೀಗಳು ಕೈಗೊಂಡಿರುವ ಜನೋಪಯೋಗಿ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ರಮದ ವಿಷಯ ತಿಳಿದುಕೊಂಡು ತಮಗೆ ಸಮಾರಂಭದಲ್ಲಿ ನೀಡಲ್ಪಟ್ಟ ಸಂಪೂರ್ಣ ಪ್ರಶಸ್ತಿಯ ಮೊತ್ತವನ್ನು ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಬಳಸಿಕೊಳ್ಳಲು ಪೂಜ್ಯ ಶ್ರೀಗಳಿಗೆ ಸಮರ್ಪಿಸಿದರು.

Leave a Reply

Your email address will not be published.