ಶೈಕ್ಷಣಿಕ ವರ್ಷ ಮುಗಿದರೂ ಇನ್ನೂ ಬಾರದ ಶೇ. 50ರಷ್ಟು ಶಾಲಾ ಅನುದಾನ


-ಶಾಲೆಗಳ ನಿರ್ವಹಣೆಗೆ ಹೆಣಗಾಡುತ್ತಿರುವ ಶಿಕ್ಷಕರು |

-ಕೈ ಕಟ್ಟಿಕೊಂಡು ಕುಳಿತ ಶಿಕ್ಷಣ ಇಲಾಖೆ ಅಧಿಕಾರಿಗಳು |

ಕೊಪ್ಪಳ : ಪ್ರಾಥಮಿಕ ಶಾಲೆಗಳ ಸಾದಿಲ್ವಾರು ವೆಚ್ಚ, ಸ್ವಚ್ಛತೆ ಸೇರಿ ಇತರೆ ಕೆಲಸಗಳಿಗೆ ನೀಡಬೇಕಿರುವ ಶಾಲಾನುದಾನ ಶೈಕ್ಷಣಿಕ ವರ್ಷ ಮುಗಿದಿದ್ದರೂ ಸಹ ಇದುವರೆಗೂ ಶೇ. 50% ರಷ್ಟು ಮಾತ್ರ ಹಣ ಬಿಡುಗಡೆಯಾಗಿದ್ದು, ಉಳಿದ ಹಣವಿಲ್ಲದೇ ಶಾಲೆಗಳ ನಿರ್ವಹಣೆ ಕಷ್ಟಕರವಾಗಿರವುದು ಕಂಡುಬಂದಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಸರ್ವ ಶಿಕ್ಷಣ ಅಭಿಯನಾ ಯೋಜನೆಯಡಿ ಈ ಶೈಕ್ಷಣಿಕ ವರ್ಷದ ಅನುದಾನದ ಶೆ. 50ರಷ್ಟು ಹಣ ಆಯಾ ಎಸ್‌ಡಿಎಂಸಿಯ ಜಂಟಿ ಖಾತೆಗೆ 2018ರ ಸೆಪ್ಟಂಬರ್‌ನಲ್ಲಿ ಎಸ್‌ಪಿಡಿಯಿಂದ ನೇರವಾಗಿ ವರ್ಗವಾಗಿದೆ. ಆದರೆ ಉಳಿದರ್ಧ ಅನುದಾನ ಮಾತ್ರ ಈ ಶೈಕ್ಷಣಿಕ ವರ್ಷ ಕಳೆಯುತ್ತಾ ಬಂದರೂ ಇನ್ನೂ ಬಿಡುಗಡೆಯಾಗಿಲ್ಲ,

ಒಂದು ಪ್ರಾಥಮಿಕ ಶಾಲೆಗಳಿಗೆ 5 ಸಾವಿರ ರೂ., ಪ್ರೌಢಶಾಲೆಗಳಿಗೆ 10 ಸಾವಿರ ರೂ. ಅನುದಾನ ನೀಡಲಾಗುತ್ತಿತ್ತು. ಈಗಿನ ಪರಿಷ್ಕೃತ ಯೋಜನೆಯಂತೆ 1ರಿಂದ 15 ಮಕ್ಕಳಿರುವ ಶಾಲೆಗೆ 12500,, 16ರಿಂದ 100 ಮಕ್ಕಳಿದ್ದರೆ 25000, 101ರಿಂದ 250 ಮಕ್ಕಳಿಗೆ 50 ಸಾವಿರ ರೂ., 251ರಿಂದ 1000 ಮಕ್ಕಳಿದ್ದರೆ 75 ಸಾವಿರ ರೂ. ಹಾಗೂ 1000ಕ್ಕಿಂತ ಮೇಲ್ಪಟ್ಟಿದ್ದರೆ 1 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ.

ಈ ಅನುದಾನದಲ್ಲಿ ಶಾಲೆಯ ಸ್ವಚ್ಛತಾ ಕಾರ್ಯ, ಬೋಧನಾ ಉಪರಕರಣಗಳು, ಸಣ್ಣಪುಟ್ಟ ದುರಸ್ಥಿ, ಶುದ್ಧ ಕುಡಿವ ನೀರು, ಕ್ರೀಡಾ ಸಾಮಗ್ರಿ, ವಿದ್ಯುತ್ ಬಿಲ್ ಸೇರಿ ಇತರ ಚಟುವಟಿಕೆಗಳಿಗೆ ಇಂತಿಷ್ಟು ಎಂದು ಖರ್ಚು ಮಾಡಬೇಕು. ಆದರೆ ಪ್ರಸಕ್ತ 2018-19ನೇ ಶೈಕ್ಷಣಿಕ ವರ್ಷದಲ್ಲಿ ಪೂರ್ಣಪ್ರಮಾಣದ ಅನುದಾನ ಬಿಡುಗಡೆಯಾಗಿಲ್ಲ. ಅನುದಾನಿತ ಶಾಲೆಗಳನ್ನು ಹೊರತುಪಡಿಸಿ ಜಿಲ್ಲೆಯ 935 ಶಾಲೆಗಳಿಗೆ 2.11 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನುಳಿದ 2.11 ಕೋಟಿ ಅನುದಾನ ಬರಬೇಕಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳಿಂದ ತಿಳಿದು ಬರುತ್ತಿದೆ.

ಈ ಮೊದಲು ಇದೇ ಯೋಜನೆಯಡಿ ಶೇ. 100ರಷ್ಟು ಅನುದಾನ ಒಂದೇ ಸಲಕ್ಕೆ ಬಿಡುಗಡೆಯಾಗುತ್ತಿತ್ತು. ಬಿಡುಗಡೆಯಾದ ಮೊತ್ತವನ್ನು ಮಾರ್ಚ್ ಅಂತ್ಯದೊಳಗೆ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಇಲಾಖೆಗೆ ಮರಳಿಸಬೇಕು. ಆದರೆ, ಕಳೆದೆರೆಡು ವರ್ಷದಿಂದ ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. 2017-18ರಲ್ಲಿ ಸಹ ಕೇವಲ ಶೇ. 50ರಷ್ಟು ಅನುದಾನ ಮಾತ್ರ ಬಿಡುಗಡೆಯಾಗಿದೆ.

ಈ ವರ್ಷವೂ ಸೆಪ್ಟಂಬರ್‌ನಲ್ಲಿ ಶೇ. 50ರಷ್ಟು ಅನುದಾನ ಬಿಡುಗಡೆಯಾಗಿದೆ. ಉಳಿದ 2.11 ಕೋಟಿ ಮಾರ್ಚ್ ಎರಡನೆ ವಾರವಾದರೂ ಬಂದಿಲ್ಲ. ಈಗಾಗಲೇ ಪ್ರೌಢಶಾಲಾ ಹಂತದ(8,9ನೇ ತರಗತಿ) ಪರೀಕ್ಷೆಗಳು ನಡೆಯುತ್ತಿದ್ದು, ಮಾ. 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಮತ್ತೊಂದೆಡೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವರ್ಷವೂ ಅನುದಾನ ಬಿಡುಗಡೆಯಾಗುವುದು ಅನುಮಾನ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಅನುದಾನ ಬಿಡುಗಡೆ ವಿವರ:

ತಾಲೂಕು ಶಾಲೆಗಳ ಸಂಖ್ಯೆ ಅನುದಾನ

ಗಂಗಾವತಿ 299 63 ಲಕ್ಷ

ಕೊಪ್ಪಳ 226 52.37 ಲಕ್ಷ

ಕುಷ್ಟಗಿ 218 50.93 ಲಕ್ಷ

ಯಲಬುರ್ಗಾ 192 44.68 ಲಕ್ಷ

ಒಟ್ಟು 935 2.11 ಕೋಟಿ

ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಅನುದಾನ ಶೇ. 50ರಷ್ಟು ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ ಅನುದಾನ ಎಸ್‌ಡಿಎಂಸಿ ಜಂಟಿ ಖಾತೆಗಳಿಗೆ ನೇರವಾಗಿ ಜಮಾ ಆಗಬೇಕಾಗಿದೆ, ಎಂಎಚ್‌ಆರ್‌ಡಿ ಇಂದ ಅನುದಾನ ನೀಡದ ಕಾರಣ ಎಸ್‌ಪಿಡಿಯಿಂದಲೂ ಹಣ ಬಿಡುಗಡೆಯಾಗಿರುವದಿಲ್ಲ, ಉಳಿದಿರುವ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ –ಉಮಾದೇವಿ ಸೊನ್ನದ, ಪ್ರಭಾರ ಡಿಡಿಪಿಐ, ಕೊಪ್ಪಳ

ನಮ್ಮ ಶಾಲೆಗೆ ಪ್ರತಿವರ್ಷ 75 ಸಾವಿರ ಶಾಲಾನುದಾನ ಬರಬೇಕಿತ್ತು. ಈ ಬಾರಿ ವರ್ಷ ಕಳೆಯುತ್ತಾ ಬಂದರೂ ಇದುವರೆಗೆ ಕೇವಲ 34,500 ಅನುದಾನ ಮಾತ್ರ ಬಂದಿದೆ. ಇದರಿಂದಾಗಿ ಶಾಲೆಗೆ ಬೇಕಾದ ಅವಶ್ಯಕ ಸಾಮಾಗ್ರಿ ಖರೀದಿಸಲು, ನಿರ್ವಹಣೆ ಮಾಡಲು ಸಮಸ್ಯೆಯಾಗಿದೆ. ಅಲ್ಲದೇ ನಿರ್ವಹಣೆ ಮಾಡುವುದು ದೊಡ್ಡ ಸಮಸ್ಯೆಯಾಗಿದೆ- ಬೀರಪ್ಪ ಅಂಡಗಿ, ಸಿಪಿಎಸ್ ಶಾಲೆ ಮುಖ್ಯೋಪಾಧ್ಯಾಯ, ಕೊಪ್ಪಳ

-ಮೌಲಾಹುಸೇನ್, ಕೊಪ್ಪಳ

Leave a Reply

Your email address will not be published.