ಸಂವಿಧಾನ ಕುರಿತು ಸುದ್ದಿಗಾರನ ಪ್ರಶ್ನೆ: ಗೋಷ್ಠಿಯಿಂದ ಹೊರನಡೆದ ಸಂಸದ ಪ್ರತಾಪ ಸಿಂಹ್


ಮೈಸೂರು: ಬಿಜೆಪಿ ಮತ್ತು ಆರ್ ಎಸ್ಎಸ್ ಮುಖಂಡರು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಕೆಂಡಾಮಂಡಲರಾದ ಸಂಸದ ಪ್ರತಾಪ ಸಿಂಹ್ ಸುದ್ದಿಗೋಷ್ಠಿಯಿಂದ ಹೊರನಡೆದ ಪ್ರಸಂಗ ನಡೆದಿದೆ. 

ಇಲ್ಲಿನ  ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಕರೆದಿದ್ದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ  ಕೈಗೊಂಡರೆ ಅಡ್ಮಿನ್ ಗೆ ಜೈಲು ಎಂಬುದೆಲ್ಲ ಸುಳ್ಳು, ಭಾರತ ಸಂವಿಧಾನದ ಆರ್ಟಿಕಲ್ 19(1) ಎ ಮೂಲಕ ರಾಷ್ಟ್ರದ ನಾಗರೀಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ನೀಡಿರುತ್ತದೆ ಎಂದು ಹೇಳಿದರು.

ಈ ವಿಚಾರವಾಗಿ  ಮಾಧ್ಯಮ ಪ್ರತಿನಿಧಿವೊಬ್ಬರು  ಒಂದು ಕಡೆ ನೀವು ಸಂವಿಧಾನ ಅಡಿಯಲ್ಲಿ ಎನ್ನುತ್ತೀದ್ದೀರಿ ಮತ್ತೊಂದೆಡೆ ನಿಮ್ಮ ಪಕ್ಷದ ಸಚಿವರುಗಳು ಮತ್ತು ಮುಖಂಡರುಗಳು ಸಂವಿಧಾನ ಬದಲಾಯಿಸಬೇಕು ಎನ್ನುತ್ತಾರಲ್ಲ ಎಂದು ಪ್ರಶ್ನಿಸಿದ್ದಕ್ಕೆ ಗರಂ ಆದ  ಪ್ರತಾಪ್ ಸಿಂಹ ಸಂಸತ್ ನಲ್ಲಿ  ಕೇಂದ್ರ ಸಚಿವ ಅನಂತ್ ಕುಮಾರ್ ಈಗಾಗಲೇ ಕ್ಷಮೆ ಕೋರಿದ್ದಾರೆ.  ಪದೆ ಪದೇ ಈ ಕುರಿತು ಮಾತನಾಡುವುದು ತಪ್ಪಾಗುತ್ತದೆ ಎಂದರು. 

ಸಂಸತ್ ನಲ್ಲಿ ಅಂಬೇಡ್ಕರ್ ಚಿತ್ರ ಹಾಕಲು ಪ್ರಧಾನಿ ಮೋದಿ ಬರಬೇಕಾಯಿತು, ಪಂಚಪೀಠಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಬಿಜೆಪಿ ಬರಬೇಕಾಯಿತು. ಅಂಬೇಡ್ಕರ್ ಬಗ್ಗೆ ಹೆಚ್ಚು ಗೌರವ ಇಟ್ಟುಕೊಂಡಿರುವವರು ನಾವೆ ಎಂದು ಪ್ರತಾಪ ಸಿಂಹ್ ಸಮರ್ಥಿಸಿಕೊಂಡರು. 

ಇನ್ನು ಆರ್ ಎಸ್ ಎಸ್ ಮುಖಂಡರೊಬ್ಬರು ಬಾಬಾಸಾಹೇಬ ರಚಿಸಿದ ಸಂವಿಧಾನದಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ, ಹಿಂದೂ ಸಂಸ್ಕೃತಿ ಕಾಪಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದ್ರೆ ನೀವು ಇಲ್ಲಿ ಸಂವಿಧಾನದ ಬಗ್ಗೆ ಮಾತನಾಡುತ್ತೀರಿ ಎಂಬ ಪ್ರಶ್ನೆಗೆ ಕೆಂಡಾಮಂಡಲರಾದ ಸಂಸದ ಪ್ರತಾಪ್ ಸಿಂಹ ತಕ್ಷಣ ಸುದ್ದಿಗೊಷ್ಠಿಯಿಂದ ಹೊರನಡೆದರು. 

Leave a Reply

Your email address will not be published.