ಚಿಕ್ಕೋಡಿಗೆ ಪ್ರಕಾಶ ಹುಕ್ಕೇರಿ ಫೈನಲ್, ಬೆಳಗಾವಿಗೆ ಇಬ್ಬರ ಹೆಸರು ಶಿಫಾರಸ್ಸು: ಸತೀಶ ಜಾರಕಿಹೊಳಿ

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ” ಕೈ ” ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಕಣಕ್ಕಿಳಿಯಲಿದ್ದು, ಬೆಳಗಾವಿ ಕ್ಷೇತ್ರಕ್ಕೆ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.

ಚಿಕ್ಕೋಡಿ ಕ್ಷೇತ್ರದಲ್ಲಿ ಹುಕ್ಕೇರಿ ಬಿಟ್ಟು ಬೇರೆ ಆಕಾಂಕ್ಷಿಗಳು ಇಲ್ಲದಿರುವ ಕಾರಣ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ತೋರಿಸಿದವರ ಪೈಕಿ ಶಿವಕಾಂತ ಸಿದ್ನಾಳ ಹಾಗೂ ಸಾಧುನವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಸ್ತೆಯಲ್ಲಿ ಓಡಾಡುತ್ತಿರುವವರಿಗೆ ಚುನಾವಣೆಯಲ್ಲಿ ನಿಲ್ಲಿ ಎಂದು ಹೇಳಲಿಕ್ಕೆ ಆಗುವುದಿಲ್ಲ. ಆಸಕ್ತಿ ಇರಬೇಕು, ಜನರಿಗೆ ಅಭ್ಯರ್ಥಿಗಳ ಪರಿಚಯವಿರಬೇಕು. ಅಂಥವರಿಗೆ ಟಿಕೆಟ್ ಕೊಡುತ್ತಿದ್ದೇವೆ. ಒಬಿಸಿಯಲ್ಲಿ ಯಾರಾದರೂ ಬೆಳೆದಿದ್ದರೆ ಅವರಿಗೇ ಟಿಕೆಟ್ ಕೊಡುತ್ತಿದ್ದೆವು ಎಂದು ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿಯವರಿಗೆ ರಾಜ್ಯದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದೇವೆ , ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.


Leave a Reply

Your email address will not be published.