ಅಭಿವೃದ್ಧಿ ಮಂತ್ರವೇ ಚುನಾವಣೆಯ ತಂತ್ರ: ಸತೀಶ ಜಾರಕಿಹೊಳಿ !


ಚಾಮರಾಜನಗರ: ರಾಜ್ಯದ ಮತ್ತು ರಾಷ್ಟ್ರದ ಅಭಿವೃದ್ಧಿಯೇ ಮುಂಬರುವ ಲೋಕಸಭಾ ಚುನಾವಣೆಯ ಮಂತ್ರವಾಗಬೇಕು ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ  ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿಯ ಅಂಬೇಡ್ಕರ್  ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇಂತಹ ಸಮಾವೇಶಗಳ ಮೂಲಕ ಸಿದ್ದರಾಮಯ್ಯ ಸರಕಾರ ಮತ್ತು ಈ ಹಿಂದಿನ ಯುಪಿಎ ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತದೆ ಎಂದು ತಿಳಿಸಿದರು.

ರಸ್ತೆ, ಕುಡಿಯುವ ನೀರು, ಕೆರೆ ತುಂಬುವ ಯೋಜನೆ, ರಾಜ್ಯ  ಮತ್ತು ರಾಷ್ಟ್ರೀಯ ಹೆದ್ದಾರಿ ಹೀಗೆ ಯಾವುದೇ ಇರಲಿ ಅಭಿವೃದ್ಧಿ ವಿಷಯಕ್ಕೆ ಹೆಚ್ಚು ಒತ್ತು ಕೊಡುವ ಪಕ್ಷ ಕಾಂಗ್ರೆಸ್ ಎಂದು ಅವರು ಹೇಳಿದರು.

ಧರ್ಮದ ಹೆಸರಿನಲ್ಲಿ ವೋಟು ಕೇಳುವವರನ್ನು ಬಿಡಿ. ಅಭಿವೃದ್ಧಿ ಮಂತ್ರದೊಂದಿಗೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸೋಣ ಎಂದೂ ಸಚಿವರು ಹೇಳಿದರು.

ಐದು ವರ್ಷಗಳ ಗಟ್ಟಿ ಆಡಳಿತ ನೀಡಿದ ಸಿದ್ದರಾಮಯ್ಯನವರ ಕಾರ್ಯಕ್ರಮಗಳನ್ನು ಸದಸ್ಯದ ದೋಸ್ತಿ ಸಕರಾವೂ ಮುಂದುವರಿಸಿಕೊಂಡು ಹೊರಟಿದೆ. ಇದೆಲ್ಲವನ್ನೂ ಮತದಾರರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ  ದಿನೇಶ ಗುಂಡೂರಾವ್, ಕಾರ್ಯಾಧಕ್ಷ ಈಶ್ವರ ಖಂಡ್ರೆ, ಸಿಎಂ ಇಬ್ರಾಹಿಂ, ಸ್ಥಳೀಯ ಶಾಸಕರು, ಜಿಲ್ಲಾ-ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾರ್ಯಕರ್ತರು  ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.