ಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ? ಬಿಜೆಪಿಯೊಂದಿಗೆ ಸಂಪರ್ಕದಲ್ಲಿರುವ ಆ ರೆಬೆಲ್ ಶಾಸಕ ಯಾರು??

ಗೋಕಾಕ : ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆಗೊಳಿಸುವ ಕಾರ್ಯತಂತ್ರವನ್ನು ಬೆಳಗಾವಿ ಲೋಕಸಭಾ ವ್ಯಾಪ್ತಿಯ ಶಾಸಕರು ರೂಪಿಸಿದ್ದು, ಇದರ ಕುರಿತಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಗೋಕಾಕದಲ್ಲಿ ಶನಿವಾರದಂದು ಆಯೋಜನೆಗೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಬಿ.ಎಸ್. ಯಡಿಯೂರಪ್ಪನವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಮಹತ್ವಪೂರ್ಣ ಚರ್ಚೆ ನಡೆದಿದೆ.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸವದತ್ತಿ ಶಾಸಕ ಆನಂದ ಮಾಮನಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಸುರೇಶ ಅಂಗಡಿ ಅವರ ಗೆಲುವಿಗೆ ಸಹಕಾರಿಯಾಗುವ ಅಂಶಗಳನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದರು. ಸುರೇಶ ಅಂಗಡಿ ಅವರ ವಿರುದ್ಧ ಅಲ್ಲಲ್ಲಿ ಅಸಮಾಧಾನವಿದೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಮುಂದೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ಕಾರ್ಯಕರ್ತರನ್ನು ನಿರ್ಲಕ್ಷಿಸಬೇಡಿ. ಅವರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಹೋಗುವಂತೆ ಸುರೇಶ ಅಂಗಡಿ ಅವರಿಗೆ ಯಡಿಯೂರಪ್ಪನವರು ಸೂಚನೆ ನೀಡಿದರೆನ್ನಲಾಗಿದೆ.

ಬಿಜೆಪಿ ಸರ್ಕಾರ ರಚನೆ? : ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅತ್ಯಧಿಕ ಸ್ಥಾನಗಳನ್ನು ಗಳಿಸಿದ್ದಾದಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೇ ಗರಿಗೆದರಿಲಿವೆ. ಕಳೆದೊಂದು ತಿಂಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಪಕ್ಷದ ನಾಯಕರುಗಳು ಸದ್ಯದ ಮಟ್ಟಿಗೆ ಆಪರೇಷನ್ ಕಮಲ ಗೋಜಿಗೆ ಹೋಗಿಲ್ಲ. ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಸರ್ಕಾರಕ್ಕೆ ಸಂಕಟವಾಗುವ ಎಲ್ಲ ಲಕ್ಷಣಗಳು ಕಾಣತೊಡಗಿವೆ. ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರ ಪತನವಾಗುವುದಂತೂ ನಿಶ್ಚಿತ. ತುಘಲಕ ದರ್ಬಾರದಲ್ಲಿ ಕಮಿಷನ್ ದಂಧೆ ನಡೆಸುತ್ತಿರುವ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯಡಿಯೂರಪ್ಪ ಅವರು, ಹೊಸ ಬಿಜೆಪಿ ಸರ್ಕಾರದ ರಚನೆ ಕುರಿತಂತೆ ಶಾಸಕರೊಂದಿಗೆ ಕಾರ್ಯತಂತ್ರಗಳನ್ನು ರೂಪಿಸಿರುವುದು ಇದಕ್ಕೆಲ್ಲ ಪುಷ್ಠಿ ನೀಡಿದಂತಾಗಿದೆ.

ಮೈತ್ರಿ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸಲು ಅದರ ಸಂಖ್ಯಾಬಲವನ್ನು ಕಡಿಮೆಗೊಳಿಸಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಿ ಸಿಎಂ ಆಗಬೇಕೆಂಬುದು ಯಡಿಯೂರಪ್ಪನವರ ಕಾರ್ಯತಂತ್ರವಾಗಿದೆ. ಈ ಹಿಂದೆ ಆಪರೇಷನ್ ಕಮಲಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದ ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಸರ್ಕಾರ ರಚನೆಗೆ ಪೂರಕವಾಗುವ ಹೆಜ್ಜೆಯನ್ನಿಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದ್ದು, ಇದಕ್ಕೆ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿರುವ ಬೆಳಗಾವಿ ಜಿಲ್ಲೆಯ ರೆಬಲ್ ಶಾಸಕರೊಬ್ಬರು ಯಡಿಯೂರಪ್ಪನವರೊಂದಿಗೆ ಸತತ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದು, ಬಿಜೆಪಿ ಸರ್ಕಾರದ ರಚನೆಯ ಕಸರತ್ತು ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಸರ್ಕಾರ ರಚನೆಗೆ ಅಗತ್ಯವಿರುವ ಶಾಸಕರ ಸಂಖ್ಯಾಬಲವನ್ನು ಕ್ರೋಢಿಕರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಯಡಿಯೂರಪ್ಪನವರು ಸೂಚನೆ ನೀಡಿದ್ದು, ಚುನಾವಣೆ ನಂತರ ರಾಜಕೀಯದಲ್ಲಿ ಬಿರುಗಾಳಿ ಏಳುವ ಲಕ್ಷಣ ತಳ್ಳಿಹಾಕುವಂತಿಲ್ಲ.
ಸುರೇಶ ಅಂಗಡಿ ಅವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಲು ಅನುಸರಿಸಬೇಕಾದ ಯೋಜನೆಯೊಂದನ್ನು ಶಾಸಕರು ರೂಪಿಸಿದ್ದಾರೆ. ಮೈತ್ರಿ ಸರ್ಕಾರದ ಜನವಿರೋಧಿ ನೀತಿಯನ್ನು ಹೆಚ್ಚಾಗಿ ಬಿಂಬಿಸಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ಯಡಿಯೂರಪ್ಪನವರು ಶಾಸಕರಿಗೆ ಸೂಚನೆ ನೀಡಿದರೆನ್ನಲಾಗಿದೆ.

ಉಮೇಶ ಕತ್ತಿಯವರೊಂದಿಗೆ ಚರ್ಚೆ : ಬಾಲಚಂದ್ರ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪನವರು ಹುಕ್ಕೇರಿ ಶಾಸಕ ಉಮೇಶ ಕತ್ತಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಐದು ನಿಮಿಷಗಳ ಕಾಲ ಚಿಕ್ಕೋಡಿ ಲೋಕಸಭಾ ಚುನಾವಣಾ ಕುರಿತಂತೆ ಚರ್ಚೆ ನಡೆಸಿದರು.

ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅಸಮಾಧಾನ ರಾಜಕೀಯದಲ್ಲಿ ಸರ್ವೇಸಾಮಾನ್ಯ. ಕೇಂದ್ರದ ವರಿಷ್ಠರ ನಿರ್ಣಯದಂತೆ ಟಿಕೇಟು ನೀಡಲಾಗಿದೆ. ಯಾವುದೇ ಕಾರಣಕ್ಕೂ ಮುನಿಸಿಕೊಳ್ಳಬೇಡಿ. ಅಣ್ಣಾಸಾಹೇಬ ಜೊಲ್ಲೆ ಹಾಗೂ ಸುರೇಶ ಅಂಗಡಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಸಹಕರಿಸಿ. ತಾವು ಪಕ್ಷದ ಹಿರಿಯ ನಾಯಕರಾಗಿದ್ದು, ತಮ್ಮ ಸೇವೆಯು ಪಕ್ಷಕ್ಕೆ ಅಗತ್ಯವಾಗಿದೆ ಎಂದು ಯಡಿಯೂರಪ್ಪನವರು ಉಮೇಶ ಕತ್ತಿಯವರಿಗೆ ಹೇಳಿದರೆನ್ನಲಾಗಿದೆ. ಇದಕ್ಕೆ ಉಮೇಶ ಕತ್ತಿಯವರು ಸಕಾರಾತ್ಮಕವಾಗಿ ಸ್ಪಂದಿಸಿ ನಿಮ್ಮ ಆದೇಶವನ್ನು ಪಾಲನೆ ಮಾಡುತ್ತೇನೆ. ಈಗಾಗಲೇ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜೊಲ್ಲೆ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಜೊಲ್ಲೆ ಗೆಲುವು ಖಚಿತವೆಂದು ಕತ್ತಿಯವರು ಯಡಿಯೂರಪ್ಪನವರಿಗೆ ತಿಳಿಸಿದರೆನ್ನಲಾಗಿದೆ.

2004 ರಿಂದ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ಸಂಸದ ಸುರೇಶ ಅಂಗಡಿ ಈ ಸಲ 4ನೇ ಬಾರಿಗೆ ಸ್ಪರ್ಧಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಶಾಸಕರು ಸುರೇಶ ಅಂಗಡಿ ಅವರ ಗೆಲುವಿಗೆ ಟೊಂಕುಕಟ್ಟಿ ನಿಂತಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೂ ಅಂಗಡಿಯವರ ಗೆಲುವಿಗೆ ವರದಾನವಾಗಲಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದಿರುವ ಸಭೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರು ಉಪಸ್ಥಿತರಿದ್ದರು.

Leave a Reply

Your email address will not be published.