ಸಹೋದರರು ಒಂದಾದರೆ ರಾಜ್ಯವನ್ನೇ ಆಳಬಹುದು: ಶಾಸಕ ಬಾಲಚಂದ್ರ ಜಾರಕಿಹೊಳಿ

ಜಾರಕಿಹೊಳಿ ಸಹೋದರರು ಒಂದಾಗಿರಬೇಕು ಎಂಬುದು ನನ್ನ ಅಭಿಲಾಷೆ

ಮಧ್ಯಸ್ಥಿಕೆವಹಿಸಲು ಸಿದ್ದ ಎಂದ್ರು ಬಾಲಚಂದ್ರ ಜಾರಕಿಹೊಳಿ

ಮಾಧ್ಯಮಗಳ ಮುಂದೆ ಕುಟುಂಬ ಸಂಬಂಧ ಹೇಳಿಕೆ ನೀಡುವುದನ್ನು ನಿಲ್ಲಿಸಿ

ಗೋಕಾಕ: ಕುಟುಂಬ ವಿಷಯದಲ್ಲಿ ನಾವೇಲ್ಲ ಸಹೋದರರು ಒಂದೆಯಾಗಿರಬೇಕೆಂಬುದು ನನ್ನ ಅಭಿಲಾಷೆ ಇದ್ದು, ಇದಕ್ಕಾಗಿ ಚಿಕ್ಕನಾಗಿದ್ದರು ಕೂಡ ನಾನು ಮಧ್ಯಸ್ಥಿಕೆವಹಿಸಲು ಸಿದ್ದ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಮತ ಚಲಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಲ್ಲಿ ಸಹೋದರರ ಮಧ್ಯೆ ಭಿನ್ನವಾದ ವಿಚಾರಗಳು ಇರುತ್ತವೆ. ಮಾಧ್ಯಮಗಳ ಮುಂದೆ ಕುಟುಂಬಕ್ಕೆ ಸಂಬಂಧಿಸಿದ ಹೇಳಿಕೆಯನ್ನು ನೀಡಿದೇ ಎಲ್ಲರೂ ಕುಳಿತು ಮಾತನಾಡಿ ಇದ್ದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು. ಇದರ ಸಂಬಂಧವಾಗಿ ನಾನು ಚಿಕ್ಕವನಾದರು ಸಹಿತ ಸಹೋದರರೊಂದಿಗೆ ಮಧ್ಯಸ್ಥಿಕೆಯನ್ನು ವಹಿಸಲು ಸಿದ್ದವಿರುವುದದಾಗಿ ತಿಳಿಸಿದರು.

ಇದೇ ವೇಳೆ ಸಹೋದರ ರಮೇಶ ಜಾರಕಿಹೊಳಿ ಅವರಿಗೆ ಸಲಹೆ ನೀಡಿದ ಅವರು, ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದೇ ಸಹೋದರರೆಲ್ಲರೂ ಒಂದೇಯಾದರೆ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯವನ್ನೇ ನಾವು ಆಳಬಹುದಾಗಿದೆ ಎಂದರು.

ಇನ್ನು ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಹೋದರ ರಮೇಶ ಜಾರಕಿಹೊಳಿ ಅವರು ಬಿಜೆಪಿಯಿಂದ ಒಂದು ರೂಪಾಯಿನು ಪಡೆದಿಲ್ಲ, ದುಡ್ಡಿಗಾಗಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ, ಸ್ವಂತ ಹಣ ಹಾಗೂ ಸಾಲ ಮಾಡಿಯಾದರೂ ಚುನಾವಣೆಯಲ್ಲಿ ಬೇರೆಯೊಬ್ಬ ವ್ಯಕ್ತಿಯನ್ನು ಗೆಲ್ಲಿಸುವ ವ್ಯಕ್ತಿಯಾಗಿದ್ದು ಬೇರೆ ಕಾರಣಗಳಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಶಿವಶಂಕರಪ್ಪ ಅವರು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಸಹೋದರ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್‍ನಿಂದ ಒಂದು ಹೆಜ್ಜೆ ಹೊರಗೆ ಕಾಲಿಟ್ಟಿದ್ದು, ಒಲ್ಲದ ಮನಸ್ಸಿನಿಂದ ಕಾಂಗ್ರೆಸ್‍ನಲ್ಲಿ ಇದ್ದಾರೆ. ಅವರು ಮುಂದಾಳತ್ವ ವಹಿಸಿದರೆ ಅವರ ಮುಖಾಂತರ ಬಿಜೆಪಿ ಒಳ್ಳೆಯದಾಗಬಹುದು ಎಂದರು.

Leave a Reply

Your email address will not be published.