ಡಾ.ರಾಜಕುಮಾರ್ 91ನೇ ಜನ್ಮದಿನಾಚರಣೆ: “ರಾಜಕುಮಾರ ಬದುಕು ಅನುಕರಣೀಯ’


ಬೆಳಗಾವಿ: ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಪದ್ಮಭೂಷಣ ಡಾ.ರಾಜಕುಮಾರ್ ಅವರ 91ನೇ ಜನ್ಮದಿನಾಚರಣೆಯನ್ನು ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ಗುರುನಾಥ ಕಡಬೂರ ಅವರು, ವರನಟ ಡಾ.ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಅವರು, ಕನ್ನಡ ನಾಡಿನ ಸಾಂಸ್ಕøತಿಕ ರಾಯಭಾರಿ ಎಂದು ಕರೆಯಲ್ಪಡುವ ಡಾ.ರಾಜಕುಮಾರ್ ಅವರ ಸರಳ ನಡೆ-ನುಡಿಯು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ತಮ್ಮ ನಟನೆಯ ಮೂಲಕ ಮನೆ ಮಾತಾಗಿರುವ ಡಾ.ರಾಜಕುಮಾರ್ ವೃತ್ತಿಬದುಕು, ಚಲನಚಿತ್ರರಂಗದಲ್ಲಿ ಅವರು ಸಲ್ಲಿಸಿದ ಸೇವೆಯೂ ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದ ಚಿತ್ರರಂಗದಲ್ಲೂ ಅನುಕರಣೀಯವಾಗಿದೆ ಎಂದು ಬಣ್ಣಿಸಿದರು.

ಇದೇ ವೇಳೆ ಮಾತನಾಡಿದ ರಂಗಸಂಪದ ತಂಡದ ಶಿರೀಷ್ ಜೋಶಿ ಅವರು, ಡಾ.ರಾಜಕುಮಾರ್ ನಟನೆ ಮತ್ತು ಗಾಯನದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ ಅಪರೂಪದ ಕಲಾವಿದರು. ಅಭಿನಯವನ್ನೇ ದೇವರು ಎಂದು ಆರಾಧಿಸುತ್ತಿದ್ದರು ಎಂದು ಹೇಳಿದರು.

ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರಿಗೆ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ ಹೀಗೆ ಹಲವಾರು ಅತ್ಯುನ್ನತ ಗೌರವ-ಪ್ರಶಸ್ತಿಗಳು ಲಭಿಸಿರುವುದು ಅವರ ವೃತ್ತಿಬದುಕಿನ ಸಾಧನೆಗೆ ಕೈಗನ್ನಡಿಯಾಗಿವೆ ಎಂದು ಜೋಶಿ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಶಾಖೆ ಸೇರಿದಂತೆ ವಿವಿಧ ಶಾಖೆಯ ಸಿಬ್ಬಂದಿ, ವಾರ್ತಾ ಇಲಾಖೆಯ ಎಂ.ಎಲ್.ಜಮಾದಾರ, ಸೈನಿಕ ಪುನರ್ವಸತಿ ಮತ್ತು ಕಲ್ಯಾಣ ಇಲಾಖೆಯ ಕೆ.ಆರ್.ಕುಲಕರ್ಣಿ, ಶಿಕ್ಷಣ ಇಲಾಖೆಯ ಶ್ರೀಮತಿ ಝಡ್.ಜಿ.ಸಯ್ಯದ್, ಜಿ.ವೈ.ಕವಳೆ, ಶ್ರೀಮತಿ ಕೆ.ಎಸ್.ಕಾಗಲೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.