ಮೊದಲ ಬಾರಿ 9 ಜಂಟಿ ಕಾರ್ಯದರ್ಶಿಗಳ ಪರ್ಯಾಯ ನೇಮಕ: ಹೀಗೇಕೆ…?

ಹೊಸದಿಲ್ಲಿ: ಕೇಂದ್ರ ಸರ್ಕಾರಿ ಸೇವೆಗೆ ಇದೇ ಮೊದಲ ಬಾರಿಗೆ ಪರ್ಯಾಯ ನೇಮಕಾತಿ ಮೂಲಕ ಒಂಬತ್ತು ಜಂಟಿ ಕಾರ್ಯದರ್ಶಿಗಳನ್ನು (ಗುತ್ತಿಗೆ ಆಧಾರದ ಮೇಲೆ) ನೇಮಿಸಲಾಗಿದೆ.

ಈವರೆಗೆ ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್​ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತರಬೇತಿ ಬಳಿಕ ವಿವಿಧ ಇಲಾಖೆಗಳಿಗೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತಿತ್ತು. ಕೆಲಸದ ಅನುಭವ ಆಧರಿಸಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗುತ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರದ ವಿನೂತನ ಕ್ರಮದಿಂದಾಗಿ ಖಾಸಗಿ ಕ್ಷೇತ್ರದ ವೃತ್ತಿಪರರು ಯುಪಿಎಸ್​ಸಿ ಪರೀಕ್ಷೆ ಇಲ್ಲದೇ ನೇರವಾಗಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಹುದ್ದೆಯಲ್ಲಿ ಕೆಲಸ ಮಾಡಬಹುದಾದಿದೆ.

ಗುಣಮಟ್ಟದಲ್ಲಿ ರಾಜಿಯಿಲ್ಲ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಜ್ಞಾನವನ್ನು ಅಳೆದು, ತೂಗಿ ಆಯ್ಕೆ ಮಾಡಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಪರೀಕ್ಷೆಗೆ ಹಾಜರಾದರೂ ಐಎಫ್​ಎಸ್, ಐಎಎಸ್, ಐಪಿಎಸ್, ಐಇಎಸ್​ಗೆ ಅಂತಿಮವಾಗಿ ಆಯ್ಕೆಯಾಗುವವರು ಸುಮಾರು ಸಾವಿರ ಮಂದಿ ಮಾತ್ರ. ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಯುಪಿಎಸ್​ಸಿ ಕಠಿಣ ಆಯ್ಕೆ ಪ್ರಕ್ರಿಯೆ ಪಾಲಿಸಿಕೊಂಡು ಬಂದಿದೆ. ಇದೇ ರೀತಿ, ಜಂಟಿ ಕಾರ್ಯದರ್ಶಿಗಳ ನೇಮಕಾತಿಯಲ್ಲಿ ಕೂಡ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಖಾಸಗಿ ಕ್ಷೇತ್ರದ ವೃತ್ತಿಪರರ ಆಯ್ಕೆಯ ಹೊಣೆ ಯುಪಿಎಸ್​ಸಿಗೆ ವಹಿಸಲಾಗಿತ್ತು. ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ ಇಲಾಖೆ ಮಾಹಿತಿ ಪ್ರಕಾರ ದೇಶದಲ್ಲಿ 6500 ಐಎಎಸ್ ಅಧಿಕಾರಿಗಳ ಹುದ್ದೆ ಇದ್ದು, 5004 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

6000 ಅರ್ಜಿಗಳು

2017ರಿಂದ 2020ರವರೆಗಿನ ಕಾರ್ಯಸೂಚಿ ಯೋಜನೆ ಸಿದ್ಧಪಡಿಸಿದ್ದ ನೀತಿ ಆಯೋಗ, ಪರ್ಯಾಯ ಮಾರ್ಗದಲ್ಲಿ ಕಾರ್ಯದರ್ಶಿಗಳ ನೇಮಕ ಕುರಿತು ಶಿಫಾ ರಸು ಮಾಡಿತ್ತು. ಇದಕ್ಕೆ 2017ರ ಫೆಬ್ರವರಿಯಲ್ಲಿ ಸೆಕ್ಟೋರಲ್ ಗ್ರೂಪ್ ಆಫ್ ಸೆಕ್ರೆಟರೀಸ್ (ಎಸ್​ಜಿಒಎಸ್) ಕೂಡ ಸಹಮತ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 10 ಕಾರ್ಯದರ್ಶಿಗಳ ಹುದ್ದೆಗೆ 2018ರ ಜೂನ್​ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಭ್ಯರ್ಥಿ 40 ವರ್ಷ ಮೇಲ್ಪಟ್ಟಿರಬೇಕು. ಕನಿಷ್ಠ 15 ವರ್ಷ ಅನುಭವ ಹೊಂದಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು. ಒಟ್ಟು 6,077 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 3,768 (ಶೇ. 38) ಅರ್ಜಿದಾರರು ಮಾತ್ರ ವಿಸõತ ಮಾಹಿತಿ ಅರ್ಜಿಯನ್ನು(ಡಿಎಎಫ್) ಭರ್ತಿಮಾಡಿದ್ದರು. ಇವರಲ್ಲಿ 89 ಮಂದಿಯನ್ನು ಮಾತ್ರ ಯುಪಿಎಸ್​ಸಿ ಆಯ್ಕೆ ಮಾಡಿ ಪರೀಕ್ಷೆ ಮತ್ತು ಸಂದರ್ಶನ ನಡೆಸಿತ್ತು.

ಹಿಂದೆ ನಡೆದಿರುವ ನೇಮಕಾತಿ

ಐಎಎಸ್ ಅಧಿಕಾರಿಗಳ ಹೊರತಾದವರನ್ನು ಸಚಿವಾಲ ಯದ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾದ ನಿದರ್ಶನಗಳು ಈ ಹಿಂದೆಯೂ ಇವೆ.

ಮನಮೋಹನ್ ಸಿಂಗ್ – 1972ರಲ್ಲಿ ಮುಖ್ಯ ಆರ್ಥಿಕ ಸಲಹೆಗಾರ, 1982ರಲ್ಲಿ ಆರ್​ಬಿಐ ಗವರ್ನರ್, 1985ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷ

ಮಾಂಟೆಕ್ ಸಿಂಗ್ ಅಹ್ಲುವಾಲಿಯಾ – 1979ರಲ್ಲಿ ವಿತ್ತ ಸಚಿವಾಲಯಕ್ಕೆ ಸಲಹೆಗಾರ, 1998ರಲ್ಲಿ ನೀತಿ ಆಯೋಗ ಸದಸ್ಯ, 2004ರಲ್ಲಿ ನೀತಿ ಆಯೋಗ ಉಪಾಧ್ಯಕ್ಷ

ಬಿಮಲ್ ಜಲನ್ – 1980ರಲ್ಲಿ ಮುಖ್ಯ ಆರ್ಥಿಕ ಸಲಹೆಗಾರ, 1985ರಲ್ಲಿ ಬ್ಯಾಂಕಿಂಗ್ ಕಾರ್ಯದರ್ಶಿ, 1989ರಲ್ಲಿ ಹಣಕಾಸು ಕಾರ್ಯದರ್ಶಿ, 1997ರಲ್ಲಿ ಆರ್​ಬಿಐ ಗವರ್ನರ್

ವಿಜಯ್ ಕೇಲ್ಕರ್ – 1998ರಲ್ಲಿ ಹಣಕಾಸು ಕಾರ್ಯದರ್ಶಿ, 1999ರಲ್ಲಿ ಐಎಂಎಫ್​ನ ಬಾಂಗ್ಲಾ, ಭೂತಾನ್, ಶ್ರೀಲಂಕಾ ವಿಭಾಗಕ್ಕೆ ಕಾರ್ಯಕಾರಿ ನಿರ್ದೇಶಕ, 2002ರಲ್ಲಿ ವಿತ್ತ ಸಚಿವಾಲಯ ಸಲಹೆ ಗಾರ, 2010ರವರೆಗೆ ವಿತ್ತ ಆಯೋಗದ ಮುಖ್ಯಸ್ಥ

ರಾಮ್ ವಿನಯ್ ಶಾಹಿ – 2002ರಲ್ಲಿ ಇಂಧನ ಸಚಿವಾಲಯ ಕಾರ್ಯದರ್ಶಿ

ಡಾ. ರಾಜೇಶ್ ಕೊಟೇಚಾ – 2017ರಿಂದ ಆಯುಷ್ ಸಚಿವಾಲಯ ಕಾರ್ಯದರ್ಶಿ

ಪರಮೇಶ್ವರನ್ ಅಯ್ಯರ್ – 2017ರಲ್ಲಿ ಕುಡಿಯುವ ನೀರು, ಸ್ವಚ್ಛತೆ ಸಚಿವಾಲಯದ ಕಾರ್ಯದರ್ಶಿ. ಸ್ವಚ್ಛ ಭಾರತ ಅಭಿಯಾನ ಮುಖ್ಯಸ್ಥ.

0

Leave a Reply

Your email address will not be published.