ಖರ್ಗೆ ಜೀವನ ಕತೆ ಹೇಳುವ ‘ಬಾಬಾ ಸಾಹೇಬರೆಡೆಗೆ’ ಕೃತಿ ಬಿಡುಗಡೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗದ ಬೀದರ್ ಮೂಲದ ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿಯನ್ನು ಕಾರ್ಯಸ್ಥಾನ ಮಾಡಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆದವರು. ಅವರು ನಡೆದು ಬಂದ ದಾರಿ ಬಾಬಾಸಾಹೇಬರೆಡೆಗೆ ನಡೆದಿರುವುದನ್ನು ಗುರುತಿಸಬಹುದಾಗಿದೆ ಎಂದು ಕುವೆಂಪು ವಿವಿ ಕನ್ನಡ ಪ್ರಾ ದ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸಿ.ವಿ.ಜಿ. ಬುಕ್ಸ್, ಕಲಬುರಗಿಯ ದಲಿತ ಸಾಹಿತ್ಯ ಪರಿಷತ್ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪ್ರೊ. ಎಚ್.ಟಿ. ಪೋತೆ ರಚಿಸಿದ ಬಾಬಾಸಾಹೇಬರೆಡೆಗೆ (ಖರ್ಗೆಜೀ ಜೀವನ ಕಥನ) ಕೃತಿ ಬಿಡುಗಡೆ ಹಾಗೂ ವಿವಿಧ ಅಕಾಡೆಮಿಗಳ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು.

40ರ ದಶಕದಲ್ಲಿ ದಕ್ಷಿಣ ಭಾರತ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಹೈ.ಕ. ಭಾಗದ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರದ ವಿವಿಧ ಮಜಲುಗಳನ್ನು ಈ ಕೃತಿ ಪರಿಚಯಿಸುತ್ತದೆ ಎಂದು ಹೇಳಿದರು.

ಖರ್ಗೆಯವರು ತಮ್ಮ ಬದುಕಿನಲ್ಲಿ ದಾಟಿ ಬಂದ ಕಲ್ಲು ಮುಳ್ಳಿನ ಹಾದಿಯನ್ನು ಪರಿಚಯಿಸುವುದರ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್, ನಾರಾಯಣ ಗುರು, ಫುಲೆ, ಬಿ.ಶಾಮಸುಂದರ ಮುಂತಾದವರ ಬದುಕು, ಸಾಧನೆಯನ್ನು ಈ ಕೃತಿ ಅನಾವರಣಗೊಳಿಸುತ್ತದೆ ಎಂದು ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು.

ಇದೇವೇಳೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಬಸವರಾಜ ಸಬರದ, ಪ್ರೊ. ಎಚ್.ಟಿ. ಪೋತೆ, ಕರ್ನಾಟಕ ನಾಟಕ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಜೋಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಅಸುಂಡಿ ಅವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ಬಸವರಾಜ ಸಬರದ ಮಾತನಾಡಿ, ಹೈ.ಕ. ಭಾಗ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿದ್ದು, ಬೆಳಕಿಗೆ ಬರುತ್ತಿಲ್ಲ ಎಂದರು.

ಲಗ್ಗೆರೆ ಸಿವಿಜಿ ಪ್ರಕಾಶನದ ಸಿ.ವಿ.ಜಿ. ಚಂದ್ರು ವೇದಿಕೆಯಲ್ಲಿದ್ದರು. ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.‌ಸೂರ್ಯಕಾಂತ ಸುಜ್ಯಾತ ಸ್ವಾಗತಿಸಿದರು. ಡಾ. ಎಂ.ಬಿ. ಕಟ್ಟಿ ನಿರೂಪಿಸಿದರು. ಡಾ. ವಸಂತ ನಾಶಿ ವಂದಿಸಿದರು.

ಡಾ. ಶ್ರೀಶೈಲ ನಾಗರಾಳ, ಪ್ರೊ. ಎಸ್.ಎಲ್. ಪಾಟೀಲ, ಪಿ.ಎಂ.‌ಮಣ್ಣೂರ, ಮಹಿಪಾಲರೆಡ್ಡಿ ಮುನ್ನೂರ್, ಬಿ.ಎಚ್. ನಿರಗುಡಿ, ಸುರೇಶ ಬಡಿಗೇರ, ಪ್ರೊ. ಸಂಗಣ್ಣ ಹೊಸಮನಿ ಇತರರಿದ್ದರು.

Leave a Reply

Your email address will not be published.