ಲೋಕಸಭಾ ಚುನಾವಣೆ : ಏ.23 ರಂದು ಕೊಪ್ಪಳ ಕ್ಷೇತ್ರದ ಮತದಾನಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ


17.36 ಲಕ್ಷ ಮತದಾರರು, 9817 ಜನ ಸಿಬ್ಬಂದಿ, 546 ವಾಹನಗಳ ಬಳಕೆ – ಪಿ.ಸುನೀಲ್ ಕುಮಾರ

  • ಮತದಾನಕ್ಕೆ ವ್ಯಾಪಕ ಬಂದೋಬಸ್ತ – ಎಸ್ಪಿ ರೇಣುಕಾ ಸುಕುಮಾರ
  • ಮತದಾನ ಹೆಚ್ಚಳದ ನಿರೀಕ್ಷೆ, ವಿಕಲಚೇತನರಿಗಾಗಿ ವಿಶೇಷ ವ್ಯವಸ್ಥೆ..: ಆರ್.ಎಸ್.ಪೆದ್ದಪ್ಪಯ್ಯ

ಕೊಪ್ಪಳ: ಎರಡನೇ ಹಂತದಲ್ಲಿ ಏಪ್ರಿಲ್ 23 ರಂದು ನಡೆಯಲಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಾಂತಿ ಮತ್ತು ಸುವ್ಯವಸ್ಥೆಯಿಂದ ಜರುಗಲು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದರು.

ಮತದಾನಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2033 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಇದರಲ್ಲಿ ಒಂದು ವಿಕಲಚೇತನ, ಹತ್ತು ಮಹಿಳಾ ಮತಗಟ್ಟಿ ಸಿಬ್ಬಂದಿಗಳಿಂದ ಕಾರ್ಯನಿರ್ವಹಿಸಲ್ಪಡುವ ಮತಗಟ್ಟೆಗಳು ಹಾಗೂ ಜಿಲ್ಲೆಯಲ್ಲಿ ಐದು ಮಾದರಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದ್ದು, ಒಟ್ಟು 17,36,118 ಜನ ಮತದಾರರ ಪೈಕಿ 862466 ಪುರುಷರು, 873539 ಮಹಿಳಾ ಹಾಗೂ 113 ಇತರೆ ಮತದಾರರು ಮತಚಲಾಯಿಸಲು 2033 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು ಪ್ರಥಮಭಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ (18 ರಿಂದ 19 ವರ್ಷದ) ಸುಮಾರು 43216 ಯುವ ಮತದಾರರಲ್ಲಿ 24557 ಪುರುಷ, 18655 ಮಹಿಳೆ ಹಾಗೂ 04 ಇತರೆ ಇದ್ದಾರೆ.

ಮಾದರಿ ಮತ್ತು ಸಖಿ ಮತಗಟ್ಟೆಗಳು : ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಸಖಿ ಹಾಗೂ ಮಾದರಿ ಮತಗಟ್ಟೆಗಳಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ನೆರಳು, ಕುಡಿಯಲು ನೀರು, ಮಜ್ಜಿಗೆ ನೀಡಲಾಗುತ್ತದೆ. ಹಾಗೂ ಮತದಾರರನ್ನು ಸ್ವಾಗತಿಸಿ ಅವರಿಗೆ ಬೇಕಾದ ಸಹಾಯ ಮಾರ್ಗದರ್ಶನ ಮಾಡುವು ಮೂಲಕ ಮತದಾನ ಮಾಡಿದ ನಂತರ ವಂದನೆಗಳೊಂದಿಗೆ ಮತದಾರರನ್ನು ಬೀಳ್ಕೊಡಲಾಗುತ್ತದೆ. ಇದು ಮತದಾನ ಹೆಚ್ಚಳಕ್ಕೆ ಮಾಡಿರುವ ಪ್ರಯತ್ನವೆಂದರು.

ಮತದಾನ ಕಾರ್ಯಕ್ಕೆ 9817 ಜನ ಸಿಬ್ಬಂದಿಗಳು ; ಮತದಾನಕ್ಕಾಗಿ 2450 ಪಿಆರ್‍ಓ, 2446 ಎಪಿಆರ್‍ಓ, 4921 ಮತಗಟ್ಟೆ ಸಿಬ್ಬಂದಿ ಸೇರಿ 9817 ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವರಿಗೆಲ್ಲರಿಗೂ ಮತದಾನ ಮಾಡಲು ಇಡಿಸಿ ಮತ್ತು ಅಂಚೆ ಮತಪತ್ರದ ವ್ಯವಸ್ಥೆ ಮಾಡಿದ್ದು ಪ್ರತಿ ಮತಗಟ್ಟೆಯಲ್ಲಿಯು ಹೆಲ್ತ್ ಕಿಟ್ ಮತ್ತು ತುರ್ತು ಚಿಕಿತ್ಸಾ ಪೆಟ್ಟಿಗೆಯನ್ನು ಕಲ್ಪಿಸಿಕೊಡಲಾಗಿದೆ. ಮತದಾನದಕ್ಕೆ 215 ಕ್ರೂಸರ್, 256 ಕೆ.ಎಸ್.ಆರ್.ಟಿ.ಸಿ.ಬಸ್, 28 ಬ್ಯಾಕ್ಸಿ ಕ್ಯಾಬ್ ಹಾಗೂ 47 ಇತರೆ ವಾಹನಗಳು ಸೇರಿ 546 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾನಕ್ಕೆ 2479 ಬ್ಯಾಲೇಟ್ ಯುನಿಟ್, 2526 ಕಂಟ್ರೋಲ್ ಯುನಿಟ್ ಹಾಗೂ 2920 ವಿವಿ ಪ್ಯಾಟ್ ಲಭ್ಯವಿರುತ್ತವೆ.

ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ : ಲೋಕಸಭಾ ಚುನಾವಣೆಯನ್ನು ಸಂಪೂರ್ಣ ಶಾಂತಿ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ, ಜಿಲ್ಲೆಯಲ್ಲಿನ ವಿವಿಧ ಹಂತದಲ್ಲಿನ 1500 ಪೊಲೀಸ್ ಅಧಿಕಾರಿಗಳು ಸೇರಿ 1500 ಗೃಹ ರಕ್ಷಕ ಸಿಬ್ಬಂದಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಗೋವಾ ಸ್ಪೇಷನ್ ಆರ್ಮಿ ಪೋರ್ಸ್, ಕೆ.ಎಸ್.ಆರ್.ಪಿ ತುಕಡಿಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ಸಿಬ್ಬಂದಿಗಳನ್ನು ಭದ್ರತೆಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. – ರೇಣುಕಾ.ಕೆ ಸುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

18797 ವಿಕಲಚೇತನ ಮತದಾರರು : 18797 ವಿಕಲಚೇತನ ಮತದಾರರಿದ್ದು ಇದರಲ್ಲಿ 2271 ಅಂಧರು, 2018 ಕಿವುಡ ಮತ್ತು ಮೂಗ ಮತದಾರರು, 12185 ವಿಕಲಚೇತನರು ಹಾಗೂ 2323 ಇತರೆ ದಿವ್ಯಾಂಗರು ಸೇರಿದ್ದಾರೆ. ಈ ಮತದಾರರಿಗೆ ಮತಗಟ್ಟೆಗಳಿಗೆ ಕರೆದುಕೊಂಡು ಬಂದು ಮತದಾನ ಮಾಡಿಸಲು ಪ್ರತಿ ಮತಗಟ್ಟೆಗೆ ಎರಡು ಆಟೋಗಳನ್ನು ನೇಮಕ ಮಾಡಲಾಗಿದೆ. ಇವರ ಸಹಾಯಕ್ಕಾಗಿ ಸ್ವಯಂ ಸೇವಕರನ್ನು ಸಹ ನೇಮಕ ಮಾಡಲಾಗಿರುತ್ತದೆ.

ಈಗಾಗಲೇ ದಿವ್ಯಾಂಗ ಮತದಾರರ ವಿವರವನ್ನು ಮ್ಯಾಪಿಂಗ್ ಮಾಡಲಾಗಿದೆ. ಇವರ ಸೌಲಭ್ಯಕ್ಕಾಗಿ ವ್ಹೀಲ್ ಚೇರ್, ಮ್ಯಾಗ್ನಿಫಯಿಂಗ್ ಗ್ಲಾಸ್ ಹಾಗೂ ಎಲ್ಲಾ ಮತಗಟ್ಟೆಗಳಲ್ಲಿ ಬ್ರೆಲ್ ಬ್ಯಾಲೆಟ್ ಮಾದರಿಯನ್ನು ನೀಡಲಾಗುತ್ತಿದೆ. ದಿವ್ಯಾಂಗ ಮತದಾರರಿಗಾಗಿ ಒಂದು ಮಾದರಿ ಮತಗಟ್ಟೆಯಲ್ಲಿ ಸ್ಥಾಪಿಸಲಾಗುತ್ತಿದ್ದು ಎಲ್ಲಾ ಸಿಬ್ಬಂದಿಗಳು ವಿಕಲಚೇತನರಿಂದಲೇ ಕಾರ್ಯನಿರ್ವಹಿಸುವ ಮತಗಟ್ಟೆ ಇದಾಗಿರುತ್ತದೆ

ಮತದಾನ ಹೆಚ್ಚಳಕ್ಕೆ ಸ್ವೀಪ್ ನಿಂದ 548000 ಜನರಿಗೆ ಮತದಾನದ ಅರಿವು :

ಚುನಾವಣೆಯಲ್ಲಿ ಗಣನೀಯವಾಗಿ ಮತದಾನ ಪ್ರಮಾಣ ಹೆಚ್ಚಿಸಲು ಹಲವಾರು ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು 548000 ಜನರಿಗೆ ಮತದಾನದ ಅರಿವು ಮತ್ತು 440000 ಗ್ರಾಮೀಣ ಹಾಗೂ ನಗರ, ಪಟ್ಟಣದ ಜನರಿಗೆ ವಿದ್ಮುನ್ಮಾನ ಮತಯಂತ್ರದ ಮೂಲಕ ಅಣಕು ಮತದಾನದ ಪ್ರಾತ್ಯಾಕ್ಷಿತೆ ಕೈಗೊಳ್ಳಲಾಗಿದೆ. ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ, ವೋಟರ್ ಗ್ರಾಂ ಸೆಲ್ಪೀ ಪ್ರೇಮ್ ಮೂಲಕ ಮತದಾನ ಮಾಡಲು ಆಕರ್ಷಿಸಲಾಗಿದೆ. ಮತ್ತು ಸೈಕಲ್ ಜಾಥಾ, ಪಂಜಿನ ಮೆರವಣಿಗೆ, ಕ್ಯಾಂಡಲ್ ಮಾರ್ಚಿಂಗ್ ಸೇರಿದಂತೆ ಎಲ್ಲಾ ಹಂತದಲ್ಲಿಯು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ – ಆರ್.ಎಸ್.ಪೆದ್ದಪ್ಪಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಐಎಎಸ್ ಪ್ರಬೋಷನರಿ ಅಧಿಕಾರಿ ಅಕ್ಷಯ ಶ್ರೀಧರ್, ಉಪ ಅರಣ್ಯ ರಕ್ಷಣಾಧಿಕಾರಿ ಯಕ್ಷಪಾಲ್ ಕ್ಷೀರಸಾಗರ, ಜಿಲ್ಲಾ ವಾರ್ತಾಧಿಕಾರಿ ಧನಂಜಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಕಲ್ಲೇಶ್, ಚುನಾವಣಾ ಶಾಖೆಯ ನಾಗರಾಜ, ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ತೀವ್ರ ಕಟ್ಟೆಚ್ಚರವಹಿಸಿ ಕ್ರಮ ಜರುಗಿಸಿದೆ, ಪೊಲೀಸ್, ಅಬಕಾರಿ ಹಾಗೂ ಚುನಾವಣಾ ಫ್ಲೆಯಿಂಗ್ ಸ್ಕ್ವಾಡ್ ತಂಡದಿಂದ ಹಾಗೂ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಒಟ್ಟು 343 ಪ್ರಕರಣಗಳನ್ನು ದಾಖಲಿಸಿದೆ, ಅಲ್ಲದೇ ಸಿವಿಜಿಲ್ ಅಪ್ಲಿಕೇಶನ್ ಮೂಲಕ 114 ದೂರುಗಳನ್ನು ಸ್ವೀಕರಿಸಲಾಗಿದ್ದು ಇದರಲ್ಲಿ 55 ನೈಜ ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ 8 ದೂರುಗಳನ್ನು ಸ್ವೀಕರಿಸಿದೆ, ಟೋಲ್ ಫ್ರೀ ಸಂಖ್ಯೆ-1950 ಇದುವರೆಗೆ 174 ದೂರುಗಳನ್ನು ದಾಖಲಿಸಲಾಗಿದ್ದು, 155 ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ – ಪಿ.ಸುನೀಲ್ ಕುಮಾರ, ಜಿಲ್ಲಾಚುನಾವಣಾಧಿಕಾರಿಗಳು, ಕೊಪ್ಪಳ.

Leave a Reply

Your email address will not be published.