ಮೋದಿ ಚೋರ್ ಅಲ್ಲ ಚೌಕಿದಾರ್:ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ

ರಫೆಲ್ ಕುರಿತು ರಾಹುಲ್ ಸುಳ್ಳು ಹೇಳಿಕೆ

ಕೊಪ್ಪಳ: ಪ್ರಧಾನಿ ಮೋದಿ ಕಪ್ಪು ಹಣ ತಂದು ಬಡವರ ಖಾತೆಗೆ ಹಾಕುತ್ತೇನೆ ಎಂದವರು ಹಾಕಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತವೆ. ಮೋದಿ ಆ ರೀತಿ ಎಲ್ಲೂ ಹೇಳಿಲ್ಲ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರುವಂತೆ ಮಾಡಿದ್ದಾರೆ. ಇದಕ್ಕಾಗಿಯೆ ದೇಶದ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಅಕೌಂಟ್ ಹೊಂದಲು ಜನಧನ್ ಯೋಜನೆ ಜಾರಿಗೆ ತಂದರು ಎಂದು ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದರಾದ ಸಂಗಣ್ಣ ಕರಡಿ ಹೇಳಿದರು.

ಲೋಕಸಭೆ ಚುನಾವಣೆ ನಿಮಿತ್ತ ಬುಧವಾರದಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಅಳವಂಡಿ, ಕವಲೂರು ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಬ್ಯಾಂಕ್ ಅಕೌಂಟ್ ತೆರೆಸಿದರು. ಬ್ಲಾಕ್ ಮನಿ ತಡೆಗಟ್ಟಲು ಜಿಎಸ್‌ಟಿ ಜಾರಿಗೆ ತಂದರು. ಇದೀಗ ಯಾವುದೇ ಒಂದು ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಇದು ಸಹ ಖಾತೆಗೆ ದುಡ್ಡು ಹಾಕಿದಂತೆ ಅಲ್ಲವೇ? ಆಯುಷ್ಮಾನ್ ಭಾರತ ಯೋಜನೆಯಡಿ ಪ್ರತಿಯೊಬ್ಬ ದೇಶದ ಪ್ರಜಗೆ 5 ಲಕ್ಷ ನೀಡುತ್ತಿದ್ದಾರೆ. ಒಂದು ಮನೆಯಲ್ಲಿ 4 ಜನ ಇದ್ದರೆ ಅವರಿಗೆ 20 ಲಕ್ಷ ದೊರೆತಂತೆ, ಪ್ರಧಾನಮಂತ್ರಿ ಜನೌಷಧ ಕೇಂದ್ರದ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುತ್ತಿವೆ. ಪ್ರತಿ ತಿಂಗಳು ಒಂದು ಕುಟುಂಬ ಸರಾಸರಿ 1000 ರೂ. ಔಷಧಿಗೆ ಖರ್ಚು ಮಾಡುತ್ತಿತ್ತು. ಆದರೆ ಇಂದು ಜನೌಷಧಿ ಕೇಂದ್ರದಿಂದ ಅದು ಕೇವಲ 200 ರೂ.ಗೆ ಇಳಿದಿದೆ. ಇವೆಲ್ಲ ಯೋಜನೆಗಳ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯ ಹಣ ಉಳಿತಾಯ ಮಾಡಿದ್ದಾರೆ. ಇದು ಪರೋಕ್ಷವಾಗಿ ಖಾತೆಗೆ ದುಡ್ಡು ಹಾಕಿದಂತೆ ಆಗಲಿಲ್ಲವೆ ಎಂಬುದನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಬದಲಾಗಿ ದೇಶದ ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡಬಾರದು ಎಂದು ಹರಿಹಾಯ್ದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್ ಮುಖಂಡರಾದ ಈಶಪ್ಪ ಮಾದಿನೂರ, ಸಂಗಪ್ಪ ವಕ್ಕಳದ, ಭೂಸನೂರುಮಠ ವಕೀಲರು, ಪೀರಾಹುಸೇನ್ ಹೊಸಳ್ಳಿ, ಅಪ್ಪಣ್ಣ ಪದಕಿ, ಹಾಲೇಶ ಕಂದಾರಿ, ವಿರೂಪಾಕ್ಷಯ್ಯ ಗದಗಿನಮಠ, ಮಹಾಂತೇಶ ಪಾಟೀಲ್, ಡಿ. ಮಲ್ಲಣ್ಣ, ಸಂಗಮೇಶ ಡಂಬಳ, ಮಲ್ಲಣ್ಣ ಬೇಲೇರಿ, ಶಂಕರಗೌಡ ಬೆಳಗಟ್ಟಿ, ಸುನಂದಮ್ಮ ಗದ್ದಿಕೇರಿ, ಉಮಾದೇವಿ ಕರ್ಕಿಹಳ್ಳಿ, ನಾಗಪ್ಪ ಸವಡಿ, ಶಂಕ್ರಪ್ಪ ಕಲಾದಗಿ, ವೈಜನಾಥ್ ದಿವಟರ್, ಪ್ರಶಾಂತ್ ರಾಯ್ಕರ್, ಸುರೇಶ್ ದಾಸರೆಡ್ಡಿ, ಶ್ರೀನಿವಾಸ ಕಲಾದಗಿ, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.