ಈ ಅಭ್ಯರ್ಥಿಗೆ ಚುನಾವಣಾ ಆಯೋಗ 75 ಲಕ್ಷ ರೂ ಕೊಡಬೇಕು ಇಲ್ಲವೇ ಕಿಡ್ನಿ ಮಾರಲು ಅವಕಾಶ ನೀಡಬೇಕಂತೆ…!!

ಭೋಪಾಲ ( ಮಧ್ಯಪ್ರದೇಶ): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಲಘಟ್ ಕ್ಷೇತ್ರದಿಂದ ಸ್ಪರ್ಧಾಕಣದಲ್ಲಿರುವ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ್ ಸಮ್ರಿತೆ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದು ಚುನಾವಣೆ ವೆಚ್ಚಕ್ಕಾಗಿ 75 ಲಕ್ಷ ರೂ. ಕೊಡಿ ಇಲ್ಲವೇ ಕಿಡ್ನಿ ಮಾರಲು ಅನುಮತಿ ಕೊಡಿ ಎಂಬ ಬೇಡಿಕೆಯನ್ನಿಟ್ಟಿದ್ದಾರೆ…!

ಜಿಲ್ಲಾ ಚುನಾವಣಾ ಅಧಿಕಾರಿ ದೀಪಕ ಆರ್ಯ ಅವರಿಗೆ ಪತ್ರ ಬರೆದಿರುವ ಸಮ್ರಿತೆ ” ಲೋಕಸಭಾ ಚುನಾವಣೆಯ ಗರಿಷ್ಠ ವೆಚ್ಚವನ್ನು 75 ಲಕ್ಷ ರೂ. ಗಳಿಗೆ ನಿಗದಿಪಡಿಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಬಳಿ ಅಷ್ಟೊಂದು ಹಣವಿಲ್ಲ. ಅದಕ್ಕಾಗಿ ಆಯೋಗ ನನಗೆ 75 ಲಕ್ಷ ರೂ. ಕೊಡಬೇಕು, ಇಲ್ಲವೇ ಯಾವುದಾದರೂ ಬ್ಯಾಂಕಿನಿಂದ ಸಾಲ ಕೊಡಿಸಬೇಕು ಅದೂ ಇಲ್ಲವಾದರೆ ಕಿಡ್ನಿ ಮಾರಲು ಅನುಮತಿ ನೀಡಬೇಕು ” ಎಂದು ಕೋರಿದ್ದಾರೆ!!

ಪ್ರಚಾರಕ್ಕೆ ಇನ್ನು ಹದಿನೈದು ದಿನಗಳಷ್ಟೇ ಕಾಲಾವಕಾಶ ಉಳಿದಿದೆ. ಈ ಅಲ್ಪಾವಧಿಯಲ್ಲಿ ಅಷ್ಟೊಂದು ಹಣ ಹೊಂದಿಸುವುದು ತಮ್ಮಿಂದ ಸಾಧ್ಯವಿಲ್ಲ. ನನ್ನ ಎದುರಾಗಳಿಗಳು ಭ್ರಷ್ಟರಿದ್ದು, ಸಾರ್ವಜನಿಕರಿಂದಲೇ ಹಣ ವಸೂಲಿ ಮಾಡಿದ್ದಾರೆ. ಅದಕ್ಕಾಗಿ ನಾನು ಚುನಾವಣಾ ಆಯೋಗಕ್ಕೆ ಹಣ ನೀಡುವಂತೆ ಕೋರಿದ್ದೇನೆ. ನಾನು ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಂಕಲ್ಪ ಮಾಡಿದ್ದೇನೆ. ಬಡವರು-ಶೋಷಿತರ ಪರವಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.

ಸಮ್ರಿತೆ ಅವರು ಈ ಹಿಂದೆ ಲಾಂಜಿ ಲೋಕಸಭಾ ಕ್ಷೇತ್ರವನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಪ್ರತಿನಿಧಿಸಿದ್ದರು.

Leave a Reply

Your email address will not be published.