ರಮೇಶ ಜಾರಕಿಹೊಳಿ “ಕಮಲ” ದತ್ತ ಹೋಗುವುದು ಪಕ್ಕಾ…?!

ಬೆಳಗಾವಿ: ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನಕ್ಕೆ ದಿನಾಂಕ ಹತ್ತಿರವಾಗಿರುವ ಬೆನ್ನಲ್ಲೇ ಜಿಲ್ಲೆಯ ಪ್ರಭಾವಿ ನಾಯಕರೆನಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಬುಧವಾರ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿವೆ.

ಮಂತ್ರಿ ಸ್ಥಾನ ಕೈತಪ್ಪಿದ ಮೇಲೆ ಮುಖಂಡರೊಡನೆ ಮುನಿಸಿಕೊಂಡು ಯಾರ ” ಕೈ ” ಗೂ ಸಿಗದೇ ಓಡಾಡಿಕೊಂಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಹೈ ಕಮಾಂಡ್ ಗೆ ಲಿಖಿತವಾಗಿ ಮನವಿ ಮಾಡಿದೆ ಎಂದು ಅವರ ಸಹೋದರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೇ ಖುದ್ದಾಗಿ ಬಹಿರಂಗಪಡಿಸಿರುವುದು ರಾಜಕೀಯ ವಲಯದಲ್ಲಿ ಬಾಂಬ್ ಸಿಡಿಸಿದ ಅನುಭವ ತಂದುಕೊಟ್ಟಿದೆ.

ರಮೇಶ ಅವರು ಚಿಕ್ಕೋಡಿ, ನಿಪ್ಪಾಣಿಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದು, ಪಕ್ಷದಲ್ಲಿ ಉಳಿಯುವ ಲಕ್ಷಣಗಳಿಲ್ಲ ಎಂದೂ ಸಚಿವರು ಹೇಳಿರುವುದು, ಜತೆಗೆ ಲಖನ್ ಜಾರಕಿಹೊಳಿ ಅವರನ್ನು ರಮೇಶ ಗೆ ಪರ್ಯಾಯವಾಗಿ ಬೆಳೆಸಬೇಕು ಎಂದು ಹೇಳಿರುವುದು ಮಹತ್ತರ ರಾಜಕೀಯ ಬೆಳವಣಿಗೆಯ ಮುನ್ಸೂಚನೆ ನೀಡಿದೆ.

ಏತನ್ಮಧ್ಯೆ ಇವತ್ತೇ ಗೋಕಾಕ ತಾಲೂಕಿನ ಕಲ್ಲೋಳಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂದಿರುವುದೂ ಕೂಡ ರಾಜಕೀಯ ಸ್ಥಿತ್ಯಂತರವಾಗುವ ವಿಚಾರಕ್ಕೆ ಪೂರಕವಾಗಿದೆ.

ಹೀಗಾಗಿ ಚುನಾವಣೆ ಬಳಿಕ ರಮೇಶ ಜಾರಕಿಹೊಳಿ ಬಿಜೆಪಿ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸಿದ್ದು, ಇದು ದೋಸ್ತಿ ಸರಕಾರದ ಮೇಲೆ ಪರಿಣಾಮ ಬೀರಿದರೆ ಅಚ್ಚರಿ ಪಡಬೇಕಾಗಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ರಮೇಶ ಜತೆ ಮತ್ತೆ ಯಾರು ಬಿಜೆಪಿ ಕಡೆಗೆ ಹಾರಿ ಹೋಗುತ್ತಾರೆ ಎಂಬುದೂ ಕುತೂಹಲ ಕೆರಳಿಸಿದೆ.

Leave a Reply

Your email address will not be published.