ಬೆಂಗಳೂರಿಗೆ ತೆರಳುವ ಮುನ್ನ ರಮೇಶ ಜಾರಕಿಹೊಳಿ ಬೆಂಬಲಿಗರಿಗೆ ಏನು ಸೂಚನೆ ಕೊಟ್ಟರು ಗೊತ್ತಾ…?!

ಗೋಕಾಕ: ಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಮುಖಂಡರೊಡನೆ ಮುನಿಸಿಕೊಂಡು ನಿಗೂಢ ನಡೆಯೊಂದಿಗೆ ರಾಜ್ಯಾದ್ಯಂತ ಚರ್ಚೆಯಾಗಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಇದೀಗ ರಾಜೀನಾಮೆ ನಿರ್ಧಾರದೊಂದಿಗೆ ರಾಜ್ಯ ಸರಕಾರದ ಅಸ್ತಿತ್ವದ ಮೇಲೆಯೇ ತೂಗುಗತ್ತಿ ಬೀಸಿದ್ದಾರೆ.

ಇಂದೇ ರಾಜೀನಾಮೆ ನೀಡುವುದಾಗಿ ಘಂಟಾಘೋಷವಾಗಿ ಹೇಳಿ ಬೆಂಗಳೂರಿಗೆ ತೆರಳಿರುವ ರಮೇಶ , ಹಾಗೆ ಹೋಗುವ ಮುನ್ನ ಗೋಕಾಕ ನಗರಸಭೆಯ ಹಾಲಿ – ಮಾಜಿ ಸದಸ್ಯರು ಹಾಗೂ ಬೆಂಬಲಿಗರ ಸಭೆ ನಡೆಸಿ ಖಡಕ್ ಸೂಚನೆ ನೀಡಿ ಹೋಗಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರಿಗೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಹಾಲಿ-ಮಾಜಿ ಸದಸ್ಯರು ಮತ್ತು ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ ರಮೇಶ, ತಾವು ಇಂದು ಅಥವಾ ನಾಳೆ ರಾಜೀನಾಮೆ ಸಲ್ಲಿಸಿ ವಾಪಸ್ ಆಗುವುದಾಗಿ ತಿಳಿಸಿದ್ದಾರೆ.

ವಾಪಸ್ ಬರುವ ವೇಳೆಗೆ ನೀವೆಲ್ಲರೂ ನಮ್ಮ ಜತೆಗೆ ಬರುತ್ತೀರೋ, ಅವರ ಜತೆ ( ಸತೀಶ ಮತ್ತು ಲಖನ್ ಜಾರಕಿಹೊಳಿ) ಹೋಗುತ್ತೀರೋ ಎಂಬ ಬಗ್ಗೆ ತೀರ್ಮಾನಿಸಿರಬೇಕು ಎಂದು ಖಡಕ್ ಆಗಿ ಸೂಚಿಸಿರುವುದು ಬೆಂಬಲಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಗೊತ್ತಾಗಿದೆ.

ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿರುವ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ತಕ್ಷಣದಲ್ಲಿ ಏನೂ ತೋಚದೇ ಪರದಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.