ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗಾಗಿಯೇ ಪ್ರತ್ಯೇಕ ಬಜೆಟ್: ರಾಹುಲ್ ಗಾಂಧಿ ಘೋಷಣೆ

ಫತೇಪುರ ಸಿಕ್ರಿ ( ಉತ್ತರ ಪ್ರದೇಶ): ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿಯವರು ಪ್ರಚಾರಕ್ಕೆ ಬಳಸುತ್ತಿರುವ ಹಣ ಎಲ್ಲಿಯದು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನೀವು ಟಿವಿ ಹಚ್ಚಿದರೂ ಮೋದಿ, ರೇಡಿಯೋ ಆನ್ ಮಾಡಿದರೂ ಮೋದಿ, ರಸ್ತೆಯಲ್ಲಿ ಓಡಾಡುತ್ತಿದ್ದರೂ ಮೋದಿ… ಹಾಗಾದರೆ ಈ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನನ್ನ ಬಳಿ ಇದೆ. ಪ್ರದಾನಿ ನರೇಂದ್ರ ಮೋದಿ ನಿಮ್ಮೆಲ್ಲರಿಂದ ಕೋಟ್ಯಂತರ ರೂ. ಗಳನ್ನು ಲೂಟಿ ಮಾಡಿದ್ದಾರೆ. ಅದೇ ಹಣವನ್ನು ಅವರು ನೀರವ್ ಮೋದಿ, ವಿಜಯ ಮಲ್ಯ, ಮೆಹುಲ್ ಚೋಕ್ಷಿ, ಲಲಿತ ಮೋದಿ ಮತ್ತು ಅನಿಲ ಅಂಬಾನಿ ಅಂತಹ ಚೋರರಿಗೆ ನೀಡಿದ್ದಾರೆ ಎಂದು ರಾಹುಲ್ ಪುನರುಚ್ಚರಿಸಿದರು.

ಕಾಂಗ್ರೆಸ್ ಪಕ್ಷವು ಈ ಬಾರಿ ಅಧಿಕಾರಕ್ಕೆ ಬಂದರೆ ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಲಾಗುವುದು ಎಂದೂ ರಾಹುಲ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

2019 ರಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈಲ್ವೆಗೆ ಹೇಗೆ ಪ್ರತ್ಯೇಕ ಬಜೆಟ್ ಮಂಡಿಸುತ್ತೇವೆಯೋ ಅದೇ ರೀತಿ ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸುತ್ತೇವೆ. ಪ್ರತಿ ವರ್ಷವೂ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುತ್ತೇವೆ ಎಂದೂ ರಾಹುಲ್ ಭರವಸೆ ಕೊಟ್ಟರು.

ಉದ್ಯೋಗಾವಕಾಶಗಳ ಕುರಿತಂತೆ ಮಾತನಾಡಿದ ಅವರು, ಎಲ್ಲೆಲ್ಲಿ ಆಲೂಗಡ್ಡೆ ಬೆಳೆಯುತ್ತಾರೆಯೋ ಅಲ್ಲೆಲ್ಲ ಚಿಪ್ಸ್ ಫ್ಯಾಕ್ಟರಿಗಳಿವೆ, ಟೋಮೆಟೋ ಬೆಳೆಯುವ ಪ್ರದೇಶಗಳಲ್ಲಿ ಟೋಮೇಟೋ ಕೆಚ್ ಅಪ್ ಫ್ಯಾಕ್ಟರಿಗಳಿವೆ. ಮಧ್ಯಪ್ರದೇಶ, ಛತ್ತೀಸಘರ್ ಹಾಗೂ ರಾಜಸ್ತಾನಗಳಲ್ಲಿ ನಾವು ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸುತ್ತಿದ್ದು, ರೈತರು ತಮ್ಮ ಬೆಳೆಗಳನ್ನು ನೇರವಾಗಿ ಫ್ಯಾಕ್ಟರಿಗಳಿಗೆ ಮಾರಾಟ ಮಾಡಬಹುದು ಎಂದರು.
Leave a Reply

Your email address will not be published.