ಸುಳ್ಳು ಹೇಳುವ ಸರಕಾರ ಕಿತ್ತೊಗೆಯಿರಿ: ಸತೀಶ ಜಾರಕಿಹೊಳಿ ಮನವಿ

ಚಾಮರಾಜನಗರ: ಭಾರತವು ಸದ್ಯ ಗಂಡಾಂತರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ನಮಗೆ ಸುಳ್ಳು ಹೇಳುವ ಸರಕಾರ ಬೇಡ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಅಭ್ಯರ್ಥಿ ಧ್ರುವನಾರಾಯಣ ಪರ ವಿವಿಧೆಡೆ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಸಚಿವರು, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಆಳುತ್ತ, ಸುಳ್ಳು ಹೇಳುತ್ತ ಹೋಗುವ ಸರಕಾರ ನಮಗೆ ಬೇಕಾಗಿಲ್ಲ. ಕೋಮುವಾದಿಗಳನ್ನು ಕಿತ್ತೊಗೆದು ಪ್ರಗತಿಯತ್ತ ಕೊಂಡೊಯ್ಯುವ ಸರಕಾರ ರಚನೆಗಾಗಿ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸತತ ಮೂರನೇ ಬಾರಿ ಕಣದಲ್ಲಿರುವ ಧ್ರುವನಾರಾಯಣ ಚಿರಪರಿಚಿತರು, ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಅವರನ್ನು ಎರಡು ಸಾರಿ ಗೆಲ್ಲಿಸಿ ಸೇವೆ ಮಾಡಲು ಕಳಿಸಿದ್ದೀರಿ. ಸಾಕಷ್ಟು ಕೆಲಸ ಮಾಡಿದ್ದಾರೆ, ಅನುದಾನ ತರುವಲ್ಲಿ ಬಹಳಷ್ಟು ಯಶಸ್ವಿಯಾಗಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಈ ಬಾರಿಯೂ ಅವರಿಗೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಆಗುವಂತೆ ನೋಡಿಕೊಳ್ಳಬೇಕು ಎಂದರು.

ಹಾಗೆ ನೋಡಿದರೆ ಧ್ರುವನಾರಾಯಣ ಅವರ ಪರವಾಗಿ ಪ್ರಚಾರ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಬೆಳಗ್ಗೆ ಯಿಂದ ರಾತ್ರಿವರೆಗೂ ಕೆಲಸ ಮಾಡಿದ ವ್ಯಕ್ತಿ ಅವರು. ಮೂರನೇ ಬಾರಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಶಿವಣ್ಣ, ಬಸವರಾಜ, ಕೃಷ್ಣಮೂರ್ತಿ, ಅಭ್ಯರ್ಥಿ ಧ್ರುವನಾರಾಯಣ ಮತ್ತು ಇತರರು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು.


Leave a Reply

Your email address will not be published.