ಸಿದ್ದರಾಮಯ್ಯ ಕೈಯ್ಯಲ್ಲಿ ನಿಂಬೆಹಣ್ಣು….!

ಕಲಬುರಗಿ: ಮಂಡ್ಯದ ನಂತರ ರಾಜ್ಯದಲ್ಲಿ ಮತ್ತೊಂದು ಹೈವೋಲ್ಟೇಜ್ ಕ್ಷೇತ್ರವೆನಿಸಿರುವ ಕಲಬುರಗಿಯಲ್ಲಿ ಕೈ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆಂದು ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಬಂದಿದ್ದು ಕುತೂಹಲದ ಚರ್ಚೆಗೆ ಗ್ರಾಸ ಒದಗಿಸಿದ ಪ್ರಸಂಗ ನಡೆಯಿತು.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದ ಪತ್ರಕರ್ತರಿಗೆ ಅವರ ಕೈಯಲ್ಲಿ ನಿಂಬೆಹಣ್ಣು ಇದ್ದುದು ಅಚ್ಚರಿ ಮೂಡಿಸಿತು. ಏನ್ಸಾರ್ ನಿಮ್ಮ ಕೈಯಲ್ಲಿ ನಿಂಬೆಹಣ್ಣು ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿಯೇ ಬಿಟ್ಟರು.

ಒಂದು ಕ್ಷಣ ಆವಾಕ್ಕಾದ ಸಿದ್ದರಾಮಯ್ಯ, ” ಇಲ್ಲ ಇಲ್ಲ, ನಾನಿದನ್ನೆಲ್ಲ ನಂಬೋದಿಲ್ಲ. ಯಾರೋ ಕೊಟ್ರು ಹಿಡಿದುಕೊಂಡಿದ್ದೆ ಅಷ್ಟೇ… ” ಎನ್ನುತ್ತಲೇ ಎದುರಿಗಿದ್ದ ಪತ್ರಕರ್ತರೊಬ್ಬರ ಜೇಬಿಗೆ ನಿಂಬೆ ಹಣ್ಣು ಹಾಕಿದಾಗ ಸ್ವಲ್ಪ ಹೊತ್ತು ನಗೆಯ ಅಲೆ ಎದ್ದಿತು.

ಇತ್ತೀಚಿನ ದಿನಗಳಲ್ಲಿ ಹೋದಲ್ಲಿ ಬಂದಲ್ಲೆಲ್ಲ ಕೈಯ್ಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಅಡ್ಡಾಡುತ್ತಿರುವ ಸಚಿವ ರೇವಣ್ಣ ಸದಾ ಸುದ್ದಿಯಲ್ಲಿರುವುದರಿಂದಾಗಿ ಸಿದ್ದರಾಮಯ್ಯ ಕೈಯ್ಯಲ್ಲಿನ ನಿಂಬೆಹಣ್ಣು ಕೂಡ ಕುತೂಹಲ ಮೂಡಿಸಿತು.

Leave a Reply

Your email address will not be published.