ಮಂಡ್ಯದಲ್ಲಿ ಸುಮಲತಾ, ಕುಮಾರಸ್ವಾಮಿ ಅಂತಿಮ ಕಸರತ್ತು: ಪ್ರಚಾರ ಅಂತ್ಯಕ್ಕೆ ಕ್ಷಣಗಣನೆ

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಬಹಿರಂಗ ಚುನಾವಣಾ ಪ್ರಚಾರ ಕೆಲವೇ ಗಂಟೆಗಳಲ್ಲಿ ಅಂತ್ಯಗೊಳ್ಳಲಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಹಾಗೂ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲೇ ಬೇಕು ಎಂದು ಪಣ ತೊಟ್ಟಿರುವ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹಾಗೂ ಶತಾಯಗತಾಯ ಗೆಲ್ಲಲೇ ಬೇಕು, ಮಂಡ್ಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲೇ ಬೇಕು ಎಂದು ಹಠ ತೊಟ್ಟಿರುವ ಸುಮಲತಾ ಅಂಬರೀಶ್​ ಭರ್ಜರಿ ಪ್ರಚಾರ ಹಾಗೂ ರೋಡ್​ ಶೋ ನಡೆಸಿದರು.

ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಮಂಡ್ಯದ ಕಾಳಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸುಮಲತಾ ಅಂಬರೀಶ್​ ನಂತರ ಭರ್ಜರಿ ರೋಡ್​ ಶೋ ನಡೆಸಿದರು. ಮಂಡ್ಯದ ಸಿಲ್ವರ್​ ಜ್ಯುಬ್ಲಿ ಪಾರ್ಕ್​ನಲ್ಲಿ ಸಮಾವೇಶ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಸಿಎಂ ಕುಮಾರಸ್ವಾಮಿ ಕೂಡ ತಗ್ಗಹಳ್ಳಿಯಲ್ಲಿ ಭರ್ಜರಿ ರೋಡ್​ ಶೋ ನಡೆಸಿದರು. ದಾರಿಯುದ್ದಕ್ಕೂ ಅಭಿಮಾನಿಗಳು ಮತ್ತು ಜೆಡಿಎಸ್​ ಪಕ್ಷದ ಕಾರ್ಯಕರ್ತರು ಕಿಕ್ಕಿರಿದು ತುಂಬಿ, ತಮ್ಮ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದರು.

ರೋಡ್​ ಶೋ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನು ಬೇರಾರ ಕೃಪೆಯಿಂದಲೂ ಸಿಎಂ ಆಗಿಲ್ಲ. ನಾನು ಏನಾದರೂ ಸಿಎಂ ಆಗಿದ್ದರೆ ಅದು ನಿಮ್ಮಂತ ಪುಣ್ಯಾತ್ಮರ ಬೆಂಬಲದಿಂದ ಎಂದು ಹೇಳುವ ಮೂಲಕ ಹೊನ್ನಾಳಿಯಲ್ಲಿ ತಮ್ಮನ್ನು ಟೀಕಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ನನ್ನ ಪ್ರೋತ್ಸಾಹ ಮತ್ತು ಸಹಕಾರದಿಂದ ರಾಜಕೀಯ ರಂಗ ಪ್ರವೇಶಿಸಿದ ಅಂಬರೀಷ್​ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಆದರೆ, ಈಗ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರ ಪತ್ನಿ ಸುಮಲತಾ ಅಂಬರೀಷ್​ ಜೆಡಿಎಸ್​ ಪಕ್ಷ ಕಳ್ಳರ ಪಕ್ಷ ಎಂದು ಟೀಕಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published.