ಮಸೀದಿಗಳಲ್ಲಿ ಮಹಿಳೆಯರ ಪ್ರಾರ್ಥನೆಗೆ ಅವಕಾಶಕ್ಕೆ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟೀಸ್

ಮಸೀದಿಗಳಲ್ಲಿ ಮಹಿಳೆಯರ ಪ್ರಾರ್ಥನೆಗೆ ಅವಕಾಶಕ್ಕೆ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟೀಸ್

ಹೊಸದಿಲ್ಲಿ : ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆಯರಿಗೆ ಇರುವ ನಿರ್ಬಂಧ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಕೇಂದ್ರ ಸರ್ಕಾರ, ರಾಷ್ಟ್ರೀಯ ಮಹಿಳಾ ಆಯೋಗ, ಕೇಂದ್ರ ವಕ್ಫ್​ ಮಂಡಳಿ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗಳಿಗೆ ಈ ಸಂಬಂಧ ನೋಟಿಸ್​ ಜಾರಿ ಮಾಡಿದೆ.

ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆಯರನ್ನು ನಿರ್ಬಂಧಿಸುವ ಕ್ರಮ ಮಹಿಳೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವರಿಗೂ ಅವಕಾಶ ಮಾಡಿಕೊಡಬೇಕು. ಮಸೀದಿಗೆ ಮಹಿಳೆಯರ ಪ್ರವೇಶ ನಿರ್ಬಂಧಿಸುವುದನ್ನು ಅಕ್ರಮ ಮತ್ತು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಪುಣೆ ಮೂಲದ ದಂಪತಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿಕೊಂಡಿದ್ದರು.

ಜತೆಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೂ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ಸುಪ್ರೀಂಕೋರ್ಟ್​ ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿ, ನೋಟಿಸ್​ಗಳನ್ನು ಜಾರಿ ಮಾಡಿತು.

ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಹಿಳೆಯರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ಬಹಳಷ್ಟು ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ಈಗ ಕುತೂಹಲದ ಸಂಗತಿ.

Leave a Reply

Your email address will not be published.