ಬಾರ್ ಬಂದ್ ಮಾಡುವಂತೆ ಸಾರ್ವಜನಿಕರು ಪೊಲೀಸರ ಮಧ್ಯೆ ಜಟಾಪಟಿ

ಧಾರವಾಡ: ಇಲ್ಲಿನ ಹೆಬ್ಬಳ್ಳಿ ಅಗಸಿಯ ಮುರುಘರಾಜೇಂದ್ರನಗರದಲ್ಲಿ ತೆರೆಯಲಾಗುತ್ತಿರುವ ಮದ್ಯದ ಮಳಿಗೆಯನ್ನು ಬಂದ್ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಮತ್ತು ಸಾರ್ವಜನಿಕರು ಮಧ್ಯೆ ಜಟಾಪಟಿ ನಡೆದು ಪೊಲೀಸರು ಕೆಲ ಸಾರ್ವಜನಿಕರನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.

ಈ ಹಿಂದೆಯೂ ಮದ್ಯದ ಮಳಿಗೆಯನ್ನು ಬಂದ್ ಮಾಡುವಂತೆ ಸಾರ್ವಜನಿಕರು ಪ್ರತಿಭಟನೆ ಮಾಡಿದ್ದರು. ಆದರೆ, ಮದ್ಯದ ಅಂಗಡಿ ಮಾಲೀಕರು ತಮ್ಮ ಮದ್ಯದ ಮಳಿಗೆ ತೆರೆಯಲು ಅಡೆತಡೆ ಉಂಟು ಮಾಡುತ್ತಿದ್ದಾರೆ ಎಂದು 16 ಮಂದಿ ಮೇಲೆ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದೇ ತಿಂಗಳು 28 ರಂದು ಈ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಲಾಗುವುದು ಅಲ್ಲಿಯವರೆಗೆ ಯತಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಕೋರ್ಟ ಆದೇಶ ನೀಡಿತ್ತು. ಆ ಪ್ರಕಾರ ಇಂದು ಮದ್ಯದ ಅಂಗಡಿಯನ್ನು ಮಾಲೀಕರು ತೆರೆಯಲು ಬಂದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಮುಂದಾದರು. ಇಲ್ಲಿ ಶಾಲೆ, ಕಾಲೇಜು, ಆಶ್ರಮಗಳಿವೆ. ಇಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಮಳಿಗೆಯನ್ನು ತೆರೆಯಬಾರದು ಎಂದು ಅಂಗಡಿಯತ್ತ ಕಲ್ಲು ಸಹ ತೂರಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಆಗಮಿಸಿದರು. ಅಬಕಾರಿ ಇಲಾಖೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಗೆ ನ್ಯಾಯಾಲಯದ ಆದೇಶ ಮನವರಿಕೆ ಮಾಡಲು ಮುಂದಾದರು. ಇದರಿಂದ ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯೆ ತೀವ್ರ ಜಟಾಪಟಿ ನಡೆಸಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಕೆಲವರನ್ನು ಬಂಧಿಸಿ ಕರೆದೊಯ್ದರು.

ಶಾಲಾ, ಕಾಲೇಜುಗಳಿಂದ 100 ಮೀಟರ್ ಒಳಗೆ ಮದ್ಯದ ಅಂಗಡಿ ಬರುತ್ತದೆ ಎಂಬುದು ಗ್ರಾಮಸ್ಥರ ಆರೋಪವಾಗಿತ್ತು. ಅಬಕಾರಿ ಇಲಾಖೆಯವರು ಸಾರ್ವಜನಿಕರ ಮುಂದೆಯೇ ಅಳತೆ ಮಾಡಿದರು. ಆದರೆ, ಮದ್ಯದ ಅಂಗಡಿ ನೂರು ಮೀಟರ್ ದಾಟಿ ಇತ್ತು.

ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಘೋಷಣೆಗಳನ್ನು ಕೂಗಿದರು. ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದ ಅಂಗಡಿ ತೆರೆಯಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಹೆಣ್ಣು ಮಕ್ಕಳನ್ನೂ ಪೊಲೀಸರು ಎಳೆದು ವಾಹನದಲ್ಲಿ ಹತ್ತಿಸುತ್ತಿದ್ದರು. ಇದಕ್ಕೆ ಸಾರ್ವಜನಿಕರು ಮತ್ತಷ್ಟು ವಿರೋಧ ವ್ಯಕ್ತಪಡಿಸಿದರು.

Leave a Reply

Your email address will not be published.