ಹಿಡ್ಕಲ್ ಜಲಾಶಯದಿಂದ ಮೊದಲ ದಿನ ಕೃಷ್ಣೆಗೆ ಮೂರು ಸಾವಿರ ಕ್ಯೂಸೆಕ್ಸ ನೀರು ಹರಿಯಿತು!

ಬೆಳಗಾವಿ: ಸುಮಾರು 94 ಕಿ.ಮೀ.ದೂರದಲ್ಲಿರುವ ಕೃಷ್ಣಾ ನದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಡ್ಯಾಮಿನಿಂದ ಒಂದು ಟಿ ಎಮ್ ಸಿ ನೀರು ಹರಿಸುವ ಜಲಸಂಪನ್ಮೂಲ ಖಾತೆಯ ಸಚಿವ ಶಿವಕುಮಾರ ಮತ್ತು ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ ಅವರ ನಿರ್ಧಾರದಂತೆ ಇಂದು ಮುಂಜಾನೆ 8 ಗಂಟೆಗೆ ಹಿಡ್ಕಲ್ ಡ್ಯಾಮಿನಿಂದ ಮೂರು ಸಾವಿರ ಕ್ಯೂಸೆಕ್ಸ ನೀರನ್ನು ಬಿಡುಗಡೆ ಮಾಡಲಾಯಿತು.
ಈ ನೀರು ಸಂಜೆಯವರೆಗೆ ಧೂಪದಾಳ ವೇರನ್ನು ತಲುಪುವ ನಿರೀಕ್ಷೆಯಿದೆ.ನಾಳೆ ಮಂಗಳವಾರ ಮುಂಜಾನೆಯಿಂದ ನಿತ್ಯ ಒಂದು ಸಾವಿರ ಕ್ಯೂಸೆಕ್ಸ ನೀರನ್ನು ಬಿಡುಗಡೆ ಮಾಡಲಾಗುವದು.
ಡ್ಯಾಮಿನಲ್ಲಿ ಸದ್ಯ 4 ಟಿ ಎಮ್ ಸಿ ನೀರಿನ ಸಂಗ್ರಹವಿದ್ದು ಒಂದು ಟಿ ಎಮ್ ಸಿ ಯನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.ಧೂಪದಾಳ ವೇರ್ ಭರ್ತಿಯಾದ ನಂತರ ಅಲ್ಲಿಂದ ಮುಗಳಖೋಡ ಚೌಕಿಯವರೆಗಿನ 50 ಕಿ.ಮೀ.ದೂರವನ್ನು ಮುಖ್ಯ ಕಾಲುವೆಯ ಮೂಲಕ ಸಾಗಬೇಕು.ಆ ಚೌಕಿಯಿಂದ ಅಥಣಿ ತಾಲೂಕಿನ ಶೇಗುಣಸಿಯವರೆಗಿನ 22 ಕಿ.ಮೀ.ಕಾಲುವೆಗುಂಟ ಹೋಗಿ ಹಿರೇಹಳ್ಳದ ಮೂಲಕ ಕೃಷ್ಣಾ ತಟವನ್ನು ಈ ನೀರು ಸೇರಬೇಕು.
ಹಿಡ್ಕಲ್ ನೀರನ್ನು ಕೃಷ್ಣಾ ನದಿಗೆ ಬಿಡಲು ತಮ್ಮ ವಿರೋಧ ವ್ಯಕ್ತಪಡಿಸಲು ನೂರಾರು ರೈತರು ಇಂದು ಸೋಮವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.
ಹಿಡ್ಕಲ್ ನೀರು ಕೃಷ್ಣಾ ನದಿಯನ್ನು ಸೇರುವದು ಅಸಾಧ್ಯದ ಮಾತೆಂಬ ಅಭಿಪ್ರಾಯ ಬಹುತೇಕ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅಭಿಪ್ರಾಯವಾಗಿದೆ.

Leave a Reply

Your email address will not be published.