ಕಾರ್ಮಿಕರು ಸರಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ನ್ಯಾ. ವಿನೋದ ಬಾಳಾನಾಯ್ಕ


ಸುರಪುರ: ತಾಲ್ಲೂಕು ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ಸುರಪುರ ಮತ್ತು ಕಾರ್ಮಿಕ ಇಲಾಖೆ ಹಾಗು ಮತ್ತಿತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಹಾಗು ಸರಕು ಸಾಗಾಣಿಕೆ ವಾಹನಗಳಲ್ಲಿ ಮಕ್ಕಳು ಮತ್ತು ಕೂಲಿ ಕಾರ್ಮಿಕರ ಸಾಗಿಸುವುದು ಕಾನೂನು ಬಾಹಿರ ಎಂಬ ವಿಷಯದ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು.

ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ ಬಾಳಾನಾಯ್ಕ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕಾರ್ಮಿಕರಿಗೆ ಇಂದು ಸರಕಾರಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ ಕಾರ್ಮಿಕರು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.ಕಾರ್ಮಿಕರು ಕೇವಲ ಕಟ್ಟಡ ಕಟ್ಟುವವರು ಮಾತ್ರವಲ್ಲದೆ ಬಡಿಗ,ಕಂಬಾರ,ಕುಂಬಾರ ಸೇರಿದಂತೆ ಎಲ್ಲಾ ವರ್ಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕ ವರ್ಗದಲ್ಲಿದ್ದು ಎಲ್ಲರು ಸೌಲಭ್ಯಗಳ ಪಡೆಯುವಂತೆ ಹಾಗು ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯುವಂತೆ ಸಲಹೆ ನೀಡಿದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ದಾವಣಗೇರೆ ಸಾಯಿಬಣ್ಣ ಮೇಲಗಲ್ ಮಾತನಾಡಿ,ಕಾರ್ಮಿಕರು ಕೇವಲ ಕೆಲಸದ ಕಡೆಗೆ ಮಾತ್ರ ಗಮನ ನೀಡದೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯ ರೂಪಿಸುವಂತವರಾಗಬೇಕು.ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ,ಆ ಯೋಜನೆಗಳ ಮೂಲಕ ಮಕ್ಕಳ ಉತ್ತಮ ಶಿಕ್ಷಣ ಕೊಡಿಸುವಂತೆ ತಿಳಿಸಿದರು.

ಜಿಲ್ಲಾ ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಸನ್ಮಾನಿಸಿ ವಿವಿಧ ಸಲಕರಣೆಗಳ ಕಿಟ್ ನೀಡಲಾಯಿತು ಹಾಗು ಬಿಸಿಯೂಟ ಅಡುಗೆ ಸಹಾಯಕಿ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತ್ರಾಯ ಕರಡಿ, ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ,ವಕೀಲರ ಸಂಘದ ಅಧ್ಯಕ್ಷ ನಂದನಗೌಡ ಎಸ್. ಪಾಟೀಲ,ಬಿಇಒ ಮೌನೇಶ ಕಂಬಾರ,ನಗರಸಭೆಯ ಓಂಕಾರೆಪ್ಪ,ಮ್ಕಕಳ ಕಲ್ಯಾಣ ಇಲಾಖೆ ಸದಸ್ಯ ಮಾಳಪ್ಪ ವಂಟೂರ ಇತರರು ಇದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಾಯಕವಾಡ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published.