ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ರಕ್ಷಣೆಗೆ ಧಾವಿಸಿದ ಮೂವರ ದುರ್ಮರಣ…!

ಮಂಡ್ಯ: ಕಾರೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಸಂದರ್ಭದಲ್ಲಿ ಗಾಯಾಳುಗಳನ್ನು ರಕ್ಷಿಸಲು ಧಾವಿಸಿದ ಮೂವರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.

ಮಣಿಗೆರೆ ಗ್ರಾಮದ ದೇವರಾಜು(೩೫), ಬಿದರಹೊಸಹಳ್ಳಿಯ ಪ್ರಸನ್ನ(೫೦), ಪ್ರದೀಪ್ (೨೫) ಮೃತಪಟ್ಟ ದುರ್ದೈವಿಗಳು.

ನಿನ್ನೆ ರಾತ್ರಿ ಮಳವಳ್ಳಿ ಕಡೆಯಿಂದ ಭಾರತೀನಗರ ಕಡೆಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಕಂಬಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ಇದೇ ಸಂದರ್ಭದಲ್ಲಿ ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ರಕ್ಷಿಸಲು ಸ್ಥಳೀಯರಾದ ದೇವರಾಜು, ಪ್ರಸನ್ನ ಹಾಗೂ ಪ್ರದೀಪ್ ಧಾವಿಸಿದ್ದಾರೆ. ಆದರೆ ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಗಮನಿಸದೆ ತುಳಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಳಿಕ ಸ್ಥಳೀಯರು ಕೂಡಲೇ ಸೆಸ್ಕ್ ಸಿಬ್ಬಂದಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕರ‍್ಕ ಕಡಿತಗೊಳಿಸಿದ್ದಾರೆ. ನಂತರ ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೆ.ಎಂ.ದೊಡ್ಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.