ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಲು ಶಿಕ್ಷಣವೇ ಪ್ರಮುಖ ಅಸ್ತ್ರ: ಲೋಕೇಶ್ ಕುಮಾರ

ಬೆಳಗಾವಿ: ಪ್ರತಿಯೊಂದು ಮಗುವಿಗೂ ಕಡ್ಡಾಯ ಶಿಕ್ಷಣವನ್ನು ನೀಡುವುದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಬಹುದು ಆದ್ದರಿಂದ ಪ್ರತಿಯೊಂದು ಮಗುವಿಗು ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್ ಲೋಕೇಶಕುಮಾರ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕರ ಯೋಜನೆ, ವಿವಿಧ ಇಲಾಖೆಗಳು, ಕಾರ್ಮಿಕ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲ ಕಾರ್ಮಿಕರ ಪದ್ದತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ ಕಾರ್ಮಿಕ ಮಕ್ಕಳನ್ನು ಕೆಲಸದಿಂದ ಮುಕ್ತಗೊಳಿಸಿ ಅವರಿಗೆ ಉತ್ತಮ ಶಿಕ್ಷಣ ಒದಗಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದರಿಂದ ಬಾಲ ಕಾರ್ಮಿಕತ್ವವನ್ನು ತಡೆಗಟ್ಟಬಹುದು ಎಂದರು.

ಯಾವದೇ ವ್ಯಕ್ತಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಕೆಲಸದಲ್ಲಿ ತೊಡಗಿಸಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಬೆಳಗಾವಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತರಾದ ಎ.ಎಚ್ ಉಮೇಶ ಅವರು ಮಾತನಾಡಿ, ತಿಳುವಳಿಕೆ ಕೊರತೆಯೇ ಬಾಲ ಕಾರ್ಮಿಕ ಪದ್ಧತಿಗೆ ದಾರಿ ಮಾಡಿಕೊಡುತ್ತಿದೆ ಎಂದರು.

ಬೆಳಗಾವಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿಜಯ ದೇವರಾಜ ಅರಸ ಅವರು ಮಾತನಾಡಿದರು.

ಬೆಳಗಾವಿ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ, ತಹಶೀಲ್ದಾರ ಮಂಜುಳಾ ನಾಯಕ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಬಿ.ಆರ್ ಗಂಗಾಧರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಡಿ ಬಡಿಗೇರ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ನಿರಗಟ್ಟಿ, ಮಹಿಳಾ ಮತ್ತು ಮಕ್ಕಳ ಕಾರ್ಖಾನೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ರಾಠೋಡ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸಿಸ್ಟರ್ ಮೇರಿ ಜೆ, ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್ ಕಿವಡಸನ್ನವರ, ಚೆಂಬರ್ಸ ಆಫ್ ಕಾಮರ್ಸ್ ಅಧ್ಯಕ್ಷರಾದ ಮಹೇಶ ಬಾಗಿ ಇತರರು ಇದ್ದರು. ಮಹೇಶ್ವರಿ ಅಂದ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆಯನ್ನು ಹಾಡಿದರು. ಕಾರ್ಮಿಕ ಅಧಿಕಾರಿ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕಿ ಜೋತಿ ಕಾಂತೆ ನಿರೂಪಿಸಿ ವಂದಿಸಿದರು.

ಜಾಥಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜೆ ಸತೀಶ್ ಸಿಂಗ್ ಅವರು ಚಾಲನೆ ನೀಡಿದರು.

Leave a Reply

Your email address will not be published.