ಮೋದಿ ಪ್ರಧಾನಿಯಾಗಿ ಪಾಕ್ ಪಿಎಂ ಇಮ್ರಾನ್ ಖಾನ್ ಆಸೆ ಈಡೇರಿಸಿದ್ದಾರೆ: ಸಿದ್ಧರಾಮಯ್ಯ

“ದೇಶದಲ್ಲಿ ಏನೂ ಪ್ರಶ್ನಿಸದಂತಹ ಸ್ಥಿತಿ ನಿರ್ಮಿಸಲಾಗಿದೆ”

ಮೈಸೂರು: ದೇಶದಲ್ಲಿ ಏನೂ ಪ್ರಶ್ನಿಸದಂತಹ ಸ್ಥಿತಿ ನಿರ್ಮಿಸಲಾಗಿದೆ. ಪ್ರಶ್ನಿಸುವವರನ್ನೆಲ್ಲ ದೇಶದ್ರೋಹಿ ಎನ್ನಲಾಗುತ್ತಿದೆ ಎಂದು ಸಿದ್ಧರಾಮಯ್ಯ ಹೇಳಿದರು.

ನಗರದಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ ಪುಲ್ವಾಮ ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಕಾರಣ. ದೇಶದ ಸಾವಿರಾರು ಸೈನಿಕರನ್ನು ಸ್ಥಳಾಂತರಿಸುವಾಗ ಕನಿಷ್ಟ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಸರ್ಕಾರದ ತಪ್ಪು. ಇದನ್ನ ಪ್ರಶ್ನಿಸಬೇಕಾಗಿದ್ದ ಮಾಧ್ಯಮಗಳು ಕೂಡ ಜಾಣ ಕುರುಡು ಪ್ರದರ್ಶಿಸಿದವು. ಪುಲ್ವಾಮ ದುರಂತದಲ್ಲಿ ಮಡಿದ ನಮ್ಮ ಸೈನಿಕರ ಸಾವಿಗೆ ಮೋದಿಯವರೇ ನೇರಹೊಣೆ ಎಂದು ಆರೋಪಿಸಿದರು.

ಬಾಲಾಕೋಟ್ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇದುವರೆಗೂ ದೊರೆತಿಲ್ಲ. ಬರೀ ಅಂತೆ ಕಂತೆಗಳನ್ನೇ ತೋರಿಸಿ ಚುನಾವಣೆ ಗೆದ್ದು ಅವರು ಅಧಿಕಾರ ಹಿಡಿದಿದ್ದಾರೆ ಎಂದರು.

ದೇಶದ ಜಿಡಿಪಿ ಕಳೆದ 5 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿದಿದೆ, ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಗರಿಷ್ಟ ಮಟ್ಟ ತಲುಪಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಾವನೆಗಳಿಗೆ ಒಳಗಾಗಿ ಮತ ನೀಡಿದರೆ ದೇಶ ದಿವಾಳಿ ಹಂತ ತಲುಪುತ್ತದೆ ಎಂಬುದಕ್ಕೆ ಇದೇ ಸ್ಪಷ್ಟ ಉದಾಹರಣೆ ಎಂದರು.

ಮೋದಿಯವರು ಪ್ರಧಾನಿ ಆಗಿರುವುದರಿಂದ ಯಾರಿಗೆ ಸಂತೋಷವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಸೆ ಮಾತ್ರ ಈಡೇರಿದೆ ಎಂದರು.

ರೈತರ, ಬಡವರ, ಸೈನಿಕರ ಕಷ್ಟದ ಬಗ್ಗೆ ಮಾತನಾಡಿದರೆ ನಮ್ಮನ್ನು ದೇಶದ್ರೋಹಿ ಎನ್ನುತ್ತಾರಲ್ಲ, ಈ ರೈತರು, ಬಡವರು, ದಲಿತರು, ಸೈನಿಕರು ಇವರೆಲ್ಲ ಅನ್ಯಗ್ರಹ ಜೀವಿಗಳೇ? ಇವರ ಸಮಸ್ಯೆ ಬಗ್ಗೆ ಪ್ರಶ್ನಿಸಬಾರದೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಪ್ರಶ್ನಿಸುವವರನ್ನೆಲ್ಲ ದೇಶದ್ರೋಹಿ ಎನ್ನುವುದು ತಪ್ಪು ಎಂದರು.

Leave a Reply

Your email address will not be published.