ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಪ್ರಕರಣ: ಮತ್ತೆ ನಾಲ್ವರ ಬಂಧನ

ಗುಂಡ್ಲುಪೇಟೆ: ತಾಲ್ಲೂಕಿನ ವೀರನಪುರ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಬುಧವಾರ ಉಳಿದ ನಾಲ್ವರು ಆರೋಪಿಗಳನ್ನೂ ವಶಕ್ಕೆ ಪಡೆದಿದ್ದಾರೆ.

ಶನೇಶ್ವರ ದೇವಾಲಯದ ರ‍್ಚಕ ಶಿವಪ್ಪ ಹಾಗೂ ಪುಟ್ಟಸ್ವಾಮಿ ಅವರನ್ನು ಮಂಗಳವಾರವೇ ಬಂಧಿಸಲಾಗಿತ್ತು. ಉಳಿದ ಆರೋಪಿಗಳಾದ ಬಸವರಾಜು, ಮಾಣಿಕ್ಯ, ಸತೀಶ್‌ ಮತ್ತು ಚನ್ನಕೇಶವಮೂರ್ತಿ ತಲೆಮರೆಸಿಕೊಂಡಿದ್ದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ನಾಲ್ವರು ಬೆಂಗಳೂರು, ಎಚ್‌.ಡಿ.ಕೋಟೆಯಲ್ಲಿ ತಲೆಮರೆಸಿಕೊಂಡಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ಉಪವಿಭಾಗ ಡಿವೈಎಸ್‌ಪಿ ಸಿ.ಟಿ.ಜಯಕುಮಾರ್‌ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

ದಲಿತ ಎಂದು ಗೊತ್ತಿರಲಿಲ್ಲ?: ಈ ಮಧ್ಯೆ, ಹಲ್ಲೆಗೊಳಗಾದ ಪ್ರತಾಪ್‌ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬುದು ಘಟನೆಯ ಸಂದರ್ಭದಲ್ಲಿ ಹಲ್ಲೆ ನಡೆಸಿದವರಿಗೆ ಗೊತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.

‘ದೇವಸ್ಥಾನದ ವಿಗ್ರಹಗಳನ್ನು ನಾಶ ಮಾಡಿರುವುದಕ್ಕೆ ಆಕ್ರೋಶಗೊಂಡು ಸ್ಥಳೀಯರು ಪ್ರತಾಪ್‌ಗೆ ಹೊಡೆದಿದ್ದಾರೆ. ಮಾನಸಿಕ ರೋಗದಿಂದ ಬಳಲುತ್ತಿರುವ ಆ ಯುವಕ ಕಬ್ಬೆಕಟ್ಟೆ ದೇವಸ್ಥಾನಕ್ಕೆ ಬರುವ ಮೊದಲು ರಾಘವಾಪುರದಲ್ಲಿರುವ ಮಹದೇಶ್ವರ ದೇವಾಲಯದ ಬಳಿ ಇರುವ ಮನೆಯೊಂದರ ಕಾಂಪೌಂಡ್‌ ಹಾರಿ ಒಳಕ್ಕೆ ಹೋಗಿದ್ದಾರೆ. ಮನೆಯವರು ಬಾಗಿಲು ತೆಗೆದು ನೋಡಿದಾಗ ಇದೇ ವ್ಯಕ್ತಿ ಮನೆ ಎದುರು ನಿಂತಿದ್ದರು. ಆಗಲೇ ಅವರ ಮೈಮೇಲೆ ಬಟ್ಟೆ ಇರಲಿಲ್ಲ, ಏನೇನೋ ಮಾತನಾಡುತ್ತಿದ್ದರು ಎಂದು ಆ ಮನೆಯವರು ತಿಳಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Leave a Reply

Your email address will not be published.