ಇಂದು ಸಂಜೆ ಕೇಂದ್ರ ಸಚಿವ ಸಂಪುಟದ ಮೊದಲ ಸಭೆ

ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ನೂತನ ಸಚಿವ ಸಂಪುಟದ ಮೊದಲ ಸಭೆ ಬುಧವಾರ ನಡೆಯಲಿದೆ. ಸರಕಾರದ ಐದು ವರ್ಷಗಳ ಆಡಳಿತದ ಹಾದಿಯ ರೂಪುರೇಷೆ ಈ ಸಭೆಯಲ್ಲಿ ತೀರ್ಮಾನವಾಗಲಿದೆ.
ಪ್ರಧಾನಿ ಮೋದಿ ಅವರು ಹಾಲಿ ಸಂಪುಟದ ಸಹಾಯಕ ಸಚಿವರಿಗೆ ಮಹತ್ವ ದ ಜವಾಬ್ದಾರಿಗಳನ್ನು ವಹಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರಕಾರ ಗುರಿ ಏನು? ಅವುಗಳನ್ನು ತಲುಪಲು ಕಾರ್ಯಸೂಚಿ ಏನು? ಸಹಾಯಕ ಸಚಿವರು ಸರಕಾರ ಮತ್ತು ಸದನದಲ್ಲಿ ನಿರ್ವಹಿಸಬೇಕಾದ ಹೊಣೆಗಾರಿಕೆ ಏನು? ಇವೇ ಮೊದಲಾದ ಸಂಗತಿಗಳ ಕುರಿತು ಪ್ರಧಾನಿ ಮೋದಿ ಮನವರಿಕೆ ಮಾಡಿಕೊಡಲಿದ್ದಾರೆ.

ಈ ಹಿಂದಿನ ಅಧಿಕಾರಾವಧಿಯಲ್ಲೂ ಮೋದಿ ಅವರು ನಿಯಮಿತವಾಗಿ ಮಂತ್ರಿ ಪರಿಷತ್‌ ಸಭೆ ನಡೆಸಿ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮತ್ತು ಅವುಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹೇಗೆಂದು ಸಚಿವರಿಗೆ ವಿವರ ನೀಡುತ್ತಿದ್ದರು. ಜತೆಗೆ ವಿವಿಧ ಸಚಿವಾಲಯಗಳ ಕಾರ್ಯಕ್ಷಮತೆಯ ಮಾಪನವನ್ನೂ ಮೋದಿ ಈ ಸಭೆಗಳಲ್ಲಿ ಮಾಡುತ್ತಿದ್ದರು.

ಅಧಿವೇಶನಕ್ಕೆ ಸಿದ್ಧತೆ: ಮುಂದಿನ ವಾರ 17ನೇ ಲೋಕಸಭೆಯ ಮೊದಲ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ, ಅಲ್ಲಿ ಎತ್ತಲಾಗುವ ವಿವಿಧ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಚಿವಾಲಯಗಳ ಬಳಿ ಸಾಕಷ್ಟು ಮಾಹಿತಿ ಇರುವುದು ಅಗತ್ಯವಾಗಿದೆ. ಹೀಗಾಗಿ ಯೋಜನೆಗಳ ಸ್ಥಿತಿಗತಿ, ಅಂಕಿ-ಅಂಶಗಳ ಸಂಗ್ರಹ, ಮುಂದಿನ ಕಾರ್ಯಯೋಜನೆ ಸಿದ್ಧತೆ ಸೇರಿದಂತೆ ಸಹಾಯಕ ಸಚಿವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲು ಮೋದಿ ಉದ್ದೇಶಿಸಿದ್ದಾರೆ.
ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಮೇ 31ರಂದು ನಡೆದಿದ್ದ ಮೊದಲ ಸಂಪುಟ ಸಭೆಯಲ್ಲಿ ‘ಪ್ರಧಾನ ಮಂತ್ರಿ ಕಿಸಾನ್‌’ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಅಲ್ಲದೆ, ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಯೋಜನೆಗೂ ಸಭೆಯಲ್ಲಿ ಗ್ರೀನ್‌ ಸಿಗ್ನಲ್‌ ದೊರೆತಿತ್ತು.
ಬುಧವಾರ ಮಂತ್ರಿ ಪರಿಷತ್‌ ಸಭೆಗೂ ಮುನ್ನಸಚಿವ ಸಂಪುಟ ಸಭೆಯೂ ನಡೆಯಲಿದೆ. ಸಹಾಯಕ ಸಚಿವರಿಗೆ ಸಂಪುಟ ಸಭೆಯಲ್ಲಿ ಭಾಗವಹಿಸುವ ಅವಕಾಶವಿಲ್ಲ. ಯಾವುದೇ ಖಾತೆಯ ಸ್ವತಂತ್ರ ನಿರ್ವಹಣೆಯ ಜವಾಬ್ದಾರಿ ಇರುವ ಸಹಾಯಕ ಸಚಿವರು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆ ಇದ್ದಾಗಲಷ್ಟೇ ಪಾಲ್ಗೊಳ್ಳಬಹುದು. ಸಂಪುಟ ಸಚಿವರು ಹಾಗೂ ಸಹಾಯಕ ಸಚಿವರನ್ನು ಒಳಗೊಂಡ ಮಂತ್ರಿ ಪರಿಷತ್‌ ಸಭೆಯನ್ನು ಯಾವಾಗ ಕರೆಯಬೇಕು ಎನ್ನುವುದು ಪ್ರಧಾನಿಯವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.

Leave a Reply

Your email address will not be published.